ಮುಂಬೈ, ಮಹಾರಾಷ್ಟ್ರ:ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂಬೈನಿಂದ ಗುಜರಾತಿ ಮತ್ತು ರಾಜಸ್ಥಾನಿಗಳನ್ನು ಹೊರಹಾಕಿದ ನಂತರ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ ಉಳಿಯುವುದಿಲ್ಲ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಹಾರಾಷ್ಟ್ರ ಜನರ ಕ್ಷಮೆ ಕೇಳುವಂತೆಯೂ ಅವರನ್ನು ಒತ್ತಾಯಿಸಲಾಗುತ್ತಿದೆ. ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ ಟ್ವೀಟ್ ಮಾಡಿ ರಾಜ್ಯಪಾಲರನ್ನು ಟೀಕಿಸಿದ್ದಾರೆ. ಬೇಡದ ವಿಷಯಗಳಿಗೆ ರಾಜ್ಯಪಾಲರು ಮೂಗು ಚುಚ್ಚಬಾರದು ಎಂದು ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹರಿಹಾಯ್ದಿದ್ದಾರೆ.
ರಾಜ್ಯಪಾಲರು ಹೇಳಿದ್ದೇನು?:ತಮ್ಮ ವಿವಿಧ ಹೇಳಿಕೆಗಳಿಂದ ಸುದ್ದಿಯಲ್ಲಿರುವ ರಾಜ್ಯಪಾಲರು ಈ ಬಾರಿ ಮುಂಬೈ ಬಗ್ಗೆ ನೇರವಾಗಿಯೇ ದೊಡ್ಡ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಬೈನಲ್ಲಿ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಂಬೈಗೆ ದುಡಿಯಲು, ವ್ಯಾಪಾರ ಮಾಡಲು, ಹೆಸರು ಮಾಡಲು ಮತ್ತು ಮುಂಬೈನಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಅನೇಕ ಜನರು ಬರುತ್ತಾರೆ.
ಅದಕ್ಕಾಗಿಯೇ ಮುಂಬೈಯನ್ನು ಕನಸಿನ ನಗರ ಎಂದು ಕರೆಯಲಾಗುತ್ತದೆ. ಆದರೆ, ನಾನು ಆಗಾಗ ಮಹಾರಾಷ್ಟ್ರದ ಜನರಿಗೆ ಹೇಳುವುದೇನೆಂದ್ರೆ ಮುಂಬೈನಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಹೊರಹಾಕಿದ ನಂತರ ಮುಂಬೈ - ಥಾಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ ಉಳಿಯುವುದಿಲ್ಲ. ಈಗ ಮುಂಬೈಯನ್ನು ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುತ್ತದೆ. ಆಗ ಮುಂಬೈಯನ್ನು ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದರು.