ಜಮ್ಮು:ಒಂದು ಸಾವಿರ ಕೋಟಿ ರೂಪಾಯಿ ಸಾಲ ವಂಚನೆ ಆರೋಪದಲ್ಲಿ ಜಮ್ಮು ಕಾಶ್ಮೀರ ಸಹಕಾರ ವಸತಿ ನಿಗಮ (ಜೆಕೆಸಿಹೆಚ್ಸಿಎಲ್)ಯ ಉನ್ನತಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಶನಿವಾರ ದೂರು ದಾಖಲಿಸಿಕೊಂಡಿದೆ.
ನಿಗಮ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಸೇರಿದಂತೆ ಹಲವರ ಮೇಲೆ ದೂರು ದಾಖಲು ಮಾಡಿಕೊಳ್ಳಲಾಗಿದೆ. ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದಿರುವ ಎಸಿಬಿ ಜೆಕೆಸಿಹೆಚ್ಸಿಎಲ್ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಬ್ರಿಜ್ ಭೂಷಣ್ ಶರ್ಮ ಅವರ ನಿವಾಸಗಳು, ಜೆಕೆಸಿಹೆಚ್ಸಿಎಲ್ ಕಚೇರಿ ಮತ್ತು ಜೆಕೆ ಹೌಸಿಂಗ್ ಮತ್ತು ಟೂರಿಸಂ ನಿಗಮಗಳ ಮೇಲೆಯೂ ದಾಳಿ ನಡೆಸಿದೆ.
ಇವುಗಳ ಮೇಲ್ವಿಚಾರಣೆಯನ್ನು ಬ್ರಿಜ್ ಭೂಷಣ್ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದು, ದಾಳಿಯ ವೇಳೆ ಪ್ರಮುಖ ವಿಚಾರಗಳು ಬಹಿರಂಗವಾಗಿದ್ದು, ಮತ್ತಷ್ಟು ವಿಚಾರಣೆ ನಡೆಯುತ್ತಿದೆ.
ಜೆಕೆಸಿಹೆಚ್ಸಿಎಲ್ ವಿರುದ್ಧ ಸಾಮಾನ್ಯ ಆಡಳಿತ ಇಲಾಖೆ ನೀಡಿದ ದೂರಿನ ಅನ್ವಯ ತಪಾಸಣೆ ನಡೆಸಲಾಗಿದೆ. ಈ ಜೆಕೆಸಿಹೆಚ್ಸಿಎಲ್ 1982ರಲ್ಲಿ ನೊಂದಾಯಿಸಲ್ಪಟ್ಟಿದ್ದು, ಜನತೆಗೆ ವಸತಿಯನ್ನು ಒದಗಿಸಲು ಅಸ್ತಿತ್ವಕ್ಕೆ ಬಂದಿತು.