ನವದೆಹಲಿ: ಭಾರತದ 15ನೇ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭದ ಸಂದರ್ಭದಲ್ಲಿ ದೇಶದ ಮೊಟ್ಟ ಮೊದಲ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಿದ ಆ ದಿನ ಹೇಗಿತ್ತು ಅನ್ನೋದನ್ನು ನೋಡೋಣ.
15 ಆಗಸ್ಟ್ 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ ಆರಂಭದಲ್ಲಿ ಕಾಮನ್ ವೆಲ್ತ್ ರಾಷ್ಟ್ರದೊಳಗಿನ ಒಂದು ಅಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶವನ್ನು ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ ಬ್ಯಾಟನ್). ಇದಾದ ನಂತರ, ಡಾ.ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನಾ ಸಭೆ ದೇಶಕ್ಕೆ ಸಂವಿಧಾನ ರಚಿಸುವ ಕಾರ್ಯಕ್ಕೆ ಮುಂದಾಯಿತು. ಅಂತಿಮವಾಗಿ 26 ಜನವರಿ 1950 ಭಾರತ ಸಂವಿಧಾನ ಜಾರಿಗೆ ಬಂದಿತು. ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ರಾಷ್ಟ್ರಪತಿ ಪದವಿ ಸೃಷ್ಟಿಯಾಯಿತು.
ಮೊದಲ ಪ್ರಮಾಣವಚನ ಸಮಾರಂಭ:1950 ಜನವರಿ 25 ರಂದು ಬೆಳಗ್ಗೆ 9-50ಕ್ಕೆ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಿ ಬಾಬು ರಾಜೇಂದ್ರ ಪ್ರಸಾದ್ ಅವರು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಗವರ್ನರ್-ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ದೇಶವನ್ನು ಪ್ರತಿನಿಧಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿಗಳು ಪ್ರಮಾಣವಚನ ಬೋಧಿಸಿದ್ದರು.
ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಅವರ ನಂತರ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಸರ್ವಪಲ್ಲಿ ರಾಧಾಕೃಷ್ಣನ್, ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಬೇರೆ ದಿನಾಂಕಗಳಂದು ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜೇಂದ್ರ ಪ್ರಸಾದ್ ಅವರು ಭಾರತದ ಗಣರಾಜ್ಯೋತ್ಸವ ದಿನವಾದ ಜನವರಿ 26, 1950ರಂದು ಅಧಿಕಾರ ಸ್ವೀಕರಿಸಿದ್ದರು. 2ನೇ ಅವಧಿಗೂ ಅವರೇ ಅಧಿಕಾರದಲ್ಲಿ ಮುಂದುವರಿದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೇ 13, 1962ರಂದು ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು. ಮೇ 13, 1967ರವರೆಗೂ ಅವರು ಅಧಿಕಾರದಲ್ಲಿದ್ದರು. ನಂತರ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದರು. ಹೀಗಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅವಧಿಪೂರ್ವ ಚುನಾವಣೆಗಳು ನಡೆಯಬೇಕಾಯಿತು.