ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಆಗಮಿಸಿದ್ದ ವಿಶ್ವ ನಾಯಕರು ಮತ್ತು ಅವರ ಪತ್ನಿಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಉಡುಗೊರೆ ನೀಡಿದ್ದಾರೆ. ಕುಶಲಕರ್ಮಿಗಳ ಕೈಯಿಂದ ಸೂಕ್ಷ್ಮವಾಗಿ ರೂಪಿಸಲ್ಪಟ್ಟ ವಸ್ತುಗಳೂ ಇದರಲ್ಲಿವೆ. ಇವೆಲ್ಲವೂ ದೇಶದ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಸಾರುತ್ತವೆ.
ಈ ವಸ್ತುಗಳ ಪೈಕಿ ಶತಮಾನಗಳಷ್ಟು- ಹಳೆಯದಾದ ಸಾಂಪ್ರದಾಯಿಕ ಸೃಷ್ಟಿಗಳು, ಸಾಟಿಯಿಲ್ಲದ ಕರಕುಶಲತೆ ಮತ್ತು ಗುಣಮಟ್ಟಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿವೆ. ನುರಿತ ಕುಶಲಕರ್ಮಿಗಳ ಕೈಚಳಕದಿಂದ ರಚಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಪತ್ನಿಗೆ ಮೋದಿ ಅವರು ಭಾರತ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷ ಉಡುಗೊರೆ ನೀಡಿದ್ದಾರೆ.
ರಿಷಿ ಪತ್ನಿಗೆ ಬನಾರಸ್ ಶಾಲು:ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಬನಾರಸ್ನಲ್ಲಿ ತಯಾರಿಸಲಾಗುವ ಶಾಲುಗಳನ್ನು ನೀಡಿದ್ದಾರೆ. ಇವುಗಳನ್ನು ಕೈಯಲ್ಲೇ ಮೃದುವಾದ ರೇಷ್ಮೆಯ ದಾರಗಳಿಂದ ನೇಯಲಾಗಿದೆ. ಈ ಶಾಲುಗಳು ವಿಶ್ವಮಾನ್ಯವಾಗಿವೆ.
ಇಂಡೋನೇಷ್ಯಾ ಅಧ್ಯಕ್ಷರ ಪತ್ನಿಗೆ ಅಸ್ಸೋಂ ಶಾಲು:ಇಂಡೋನೇಷ್ಯಾದ ಅಧ್ಯಕ್ಷರ ಪತ್ನಿಗೆ ಅಸ್ಸೋಂನಲ್ಲಿ ತಯಾರಿಸಲಾಗುವ ನೇಯ್ದ ಶಾಲುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ನುರಿತ ಕುಶಲರ್ಮಿಗಳು ಇವನ್ನು ತಯಾರಿಸಿದ್ದಾರೆ. ಇವುಗಳನ್ನೂ ರೇಷ್ಮೆಯಿಂದ ತಯಾರಿಸಲಾಗಿದ್ದು, ಈ ಶಾಲನ್ನು ಕದಮ್ ಮರದ ಪೆಟ್ಟಿಗೆಯಲ್ಲಿ ನೀಡಲಾಗಿದೆ. ಕದಮ್ ಮರವನ್ನು ಭಾರತೀಯ ಸಂಸ್ಕೃತಿಯಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.