ಅಮರಾವತಿ(ಆಂಧ್ರಪ್ರದೇಶ): ಗಣರಾಜ್ಯೋತ್ಸವದ ದಿನದಂದೇ ಆಂಧ್ರಪ್ರದೇಶದಲ್ಲಿ ಹೊಸದಾಗಿ 13 ಜಿಲ್ಲೆಗಳು ರಚನೆಯಾಗಿವೆ. ಈ ಕುರಿತು ಆಂಧ್ರಪ್ರದೇಶ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಆಂಧ್ರಪ್ರದೇಶ ಜಿಲ್ಲೆಗಳ ರಚನೆ ಕಾಯ್ದೆಯ ಸೆಕ್ಷನ್ 3(5) ಅಡಿ ಜಿಲ್ಲೆಗಳನ್ನು ರಚನೆ ಮಾಡಲಾಗಿದ್ದು, ಈ ಮೂಲಕ ಆಂಧ್ರಪ್ರದೇಶದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಮುಂದಿನ ಯುಗಾದಿ ಹಬ್ಬದ ವೇಳೆಗೆ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಳಿದ ಎಲ್ಲ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬೇಕೆಂದು ಆಂಧ್ರಪ್ರದೇಶ ಸರ್ಕಾರ ಗುರಿ ಹೊಂದಿದೆ. ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಗಳು, ಮತ್ತು ಸೌಲಭ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.