ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ಸೇಬು ಹಣ್ಣಿನ ಉದ್ಯಮ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಕಾಶ್ಮೀರದ ಮೇಲೆ ಆರ್ಥಿಕ ಭಯೋತ್ಪಾದನೆ ಹೇರುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ದ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ತೋಟಗಾರಿಕೆ ಹಾಗೂ ಹಣ್ಣಿನ ರೈತರ ಜೊತೆಗೆ ಮಾತುಕತೆ ನಡೆಸಿದ ಮೆಹಬೂಬಾ, ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ್ಣು ತುಂಬಿದ ಟ್ರಕ್‌ಗಳನ್ನು ಸುಗಮವಾಗಿ ಸಾಗಿಸುವಲ್ಲಿ ಅಧಿಕಾರಿಗಳ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾಶ್ಮೀರಿ ಹಣ್ಣುಗಳ ಬೆಲೆ ಕಡಿಮೆ ಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಉದ್ದೇಶ ಪೂರ್ವಕವಾಗಿ ಟ್ರಕ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಜಮ್ಮುದಿಂದ ಕಾಶ್ಮೀರಕ್ಕೆ ಬರುವ ಟ್ರಕ್ ಒಂದೇ ದಿನದಲ್ಲಿ ತನ್ನ ಗಮ್ಯಸ್ಥಾನ ತಲುಪುತ್ತವೆ. ಆದರೆ, ಅದೇ ಟ್ರಕ್ ಹಣ್ಣುಗಳನ್ನು ತುಂಬಿಸಿಕೊಂಡು ಜಮ್ಮುವಿಗೆ ಹಿಂದಿರುಗಲು ನಾಲ್ಕೈದು ದಿನಗಳನ್ನು ಹೇಗೆ ತೆಗೆದುಕೊಳ್ಳುತ್ತದೆ?. ಇದೊಂದು ಪಿತೂರಿಯಾಗಿದೆ ಎಂದು ಕಿಡಿಕಾರಿದರು.