ನವದೆಹಲಿ:ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟಿಗೊಳಗಾಗಿದೆ. ತುತ್ತು ಅನ್ನಕ್ಕಾಗಿ ಅಲ್ಲಿನ ಜನರು ಪರಿತಪಿಸುತ್ತಿದ್ದಾರೆ. ಇದೇ ವಿಚಾರವಾಗಿ ಇಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಇದರಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿಯಾಗಿ ಮಾತನಾಡಿದರು.
ಶ್ರೀಲಂಕಾ ಬಿಕ್ಕಟ್ಟು ವಿಚಾರವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಾತನಾಡಿದ್ದು, ನಮ್ಮ ನೆರೆಯ ರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮನ್ನು ಚಿಂತಿತರನ್ನಾಗಿ ಮಾಡಿದೆ. ಅಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆದರೆ, ಶ್ರೀಲಂಕಾ ಜೊತೆ ಭಾರತದ ಹೋಲಿಕೆ ಮಾಡುವುದು ಸರಿಯಲ್ಲಿ ಎಂದರು.
ಭಾರತದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಲು ಸಾಧ್ಯವಿಲ್ಲ ಎಂದ ಅವರು, ದೇಶದಲ್ಲಿ ಬಲಿಷ್ಠವಾದ ನಾಯಕತ್ವವಿದೆ. ಭಾರತದಲ್ಲೂ ಶ್ರೀಲಂಕಾದಲ್ಲಿ ಆಗಿರುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದು ಹೇಳುವುದನ್ನ ಕೇಳುತ್ತಿದ್ದೇವೆ. ಆದರೆ, ಈ ಹೋಲಿಕೆ ಸರಿಯಲ್ಲ ಎಂದರು
ಇಂದಿನ ಸಭೆಯಲ್ಲಿ ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಕ್ಷ, ಟಿಆರ್ಎಸ್, ಬಹುಜನ ಸಮಾಜ ಪಕ್ಷ, ವೈಎಸ್ಆರ್ ಕಾಂಗ್ರೆಸ್, ಎಂಡಿಎಂಕೆ, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು. ಶ್ರೀಲಂಕಾದಲ್ಲಿ ಕಳೆದ ಏಳು ದಶಕಗಳಲ್ಲೇ ಉಂಟಾಗದಂತಹ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ತೀವ್ರ ವಿದೇಶಿ ವಿನಿಮಯ ಕೊರತೆ, ಆಹಾರ, ಇಂಧನ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳು ಜನರಿಗೆ ಸಿಗದಂತಾಗಿವೆ.
ಶ್ರೀಲಂಕಾ ಬಿಕ್ಕಟ್ಟಿನಿಂದಾಗಿ ತಮಿಳುನಾಡಿಗೆ ಅಲ್ಲಿನ ನಿರಾಶ್ರಿತರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬರುತ್ತಿದ್ದಾರೆ. ಇದು ರಾಜ್ಯದಲ್ಲಿ ಸಮಸ್ಯೆ ಉಂಟುಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರ ಬಳಿ ಕೆಲ ದಿನಗಳ ಹಿಂದೆ ಅರಿಕೆ ಮಾಡಿಕೊಂಡಿದ್ದರು. ಇದರ ಬೆನ್ನಲೇ ಸರ್ವಪಕ್ಷ ಸಭೆ ನಡೆಸಲಾಗಿದೆ.
ಇದನ್ನೂ ಓದಿರಿ:ಶ್ರೀಲಂಕಾ ಬಿಕ್ಕಟ್ಟು ಚರ್ಚಿಸಲು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ
ಇಂದಿನ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಅವರು ಸಭೆಗೆ ಗೈರಾಗಿದ್ದಾರೆಂದು ತಿಳಿದು ಬಂದಿದೆ.