ನವದೆಹಲಿ: ರೈತರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರು ರಬಿ (ಹಿಂಗಾರು) ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪ್ರಕಟಿಸಿದೆ. ಪ್ರಸಕ್ತ ಬೆಳೆ ವರ್ಷದಲ್ಲಿ ಕ್ವಿಂಟಲ್ ಗೋಧಿಗೆ 110 ರೂ. ಹಾಗೂ ಸಾಸಿವೆಗೆ 400 ರೂಪಾಯಿ ಹೆಚ್ಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಆರು ರಬಿ ಬೆಳೆಗಳ ಎಂಎಸ್‌ಪಿ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಎಂಎಸ್‌ಪಿ ಹೆಚ್ಚಳ ಕುರಿತಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಕ್ವಿಂಟಲ್ ಮಸೂರ್ ಧಾನ್ಯಕ್ಕೆ ಗರಿಷ್ಠ 500 ರೂ. ಎಂಎಸ್‌ಪಿ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಮಸೂರ್ ಧಾನ್ಯಕ್ಕೆ 5,500 ರೂ. ನಿಗದಿ ಮಾಡಲಾಗಿತ್ತು. ಈ ವರ್ಷ 500 ರೂ. ಏರಿಕೆಯಿಂದ 6,000 ರೂ.ಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.