ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಯುಗಾದಿ ಗಿಫ್ಟ್ ಸಿಕ್ಕಿದೆ. ಕೇಂದ್ರ ಸರ್ಕಾರ ಶೇ.3ರಷ್ಟು ತುಟ್ಟಿ ಭತ್ಯೆ ಏರಿಸಲು ನಿರ್ಧಾರ ಕೈಗೊಂಡಿದ್ದು, ಇದು ಪಿಂಚಣಿದಾರರಿಗೂ ಅನ್ವಯವಾಗಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ದಿನಮಾನಗಳಲ್ಲಿ ತುಟ್ಟಿ ಭತ್ಯೆ (ಡಿಎ) ಏರಿಸಿದ್ದು ನೌಕರರು ಹಾಗು ಪಿಂಚಣಿದಾರರಲ್ಲಿ ನಿರಾಳತೆ ಮೂಡಿಸಿದೆ. ಅಲ್ಲದೇ, ಇದು ಜನವರಿ ತಿಂಗಳಿಂದಲೇ ಪೂರ್ವಾನ್ವಯವಾಗಿದೆ. ಸರಿ ಸುಮಾರು 47.68 ಲಕ್ಷ ನೌಕರರು ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಇದರ ಲಾಭ ಸಿಗಲಿದೆ.
7ನೇ ಕೇಂದ್ರ ವೇತನ ಆಯೋಗಕ್ಕೆ ಅನುಗುಣವಾಗಿ ಡಿಎ (ಡಿಯರ್‌ನೆಸ್ ಅಲೋವೆನ್ಸ್) ಹಾಗೂ ಡಿಆರ್(ಡಿಯರ್‌ನೆಸ್ ರಿಲೀಫ್) ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಪ್ರತಿ ವರ್ಷವೂ ಸರ್ಕಾರಕ್ಕೆ 9,544 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎನ್ನಲಾಗುತ್ತಿದೆ.
ಸರ್ಕಾರ ಇದನ್ನು ಪ್ರತಿ ಜನವರಿ ಮತ್ತು ಜುಲೈ ಹೀಗೆ ವರ್ಷದಲ್ಲಿ ಎರಡು ಬಾರಿ ಪರಿಷ್ಕರಣೆ ಮಾಡುತ್ತದೆ. ನೌಕರರಿಂದ ನೌಕರರ ನಡುವೆ ತುಟ್ಟಿ ಭತ್ಯೆ ವ್ಯತ್ಯಾಸ ಇರಲಿದೆ. ನಗರ, ಉಪ ನಗರ ಹಾಗೂ ಗ್ರಾಮೀಣ ಭಾಗದ ನೌಕರರಿಗೆ ಬೇರೆಬೇರೆ ತುಟ್ಟಿ ಭತ್ಯೆ ಭರಿಸಲಾಗುತ್ತದೆ.
ಇದನ್ನೂ ಓದಿ:ಬಿಮ್ಸ್ಟೆಕ್ಗೆ ಭಾರತದಿಂದ ಒಂದು ಮಿಲಿಯನ್ ಡಾಲರ್ ನೆರವು : ಪ್ರಧಾನಿ ಮೋದಿ