ಗೋರಖ್‌ಪುರ (ಉತ್ತರಪ್ರದೇಶ): ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಶಿಕ್ಷಣ, ರಾಜಕೀಯ, ಸಿನೆಮಾ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ. ಅವಳು ತಾಯಿಯಾಗಿ, ಮಗಳಾಗಿ, ಸೊಸೆಯಾಗಿ ಹೀಗೆ ಸಮಾಜದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಹೀಗೆ ಇತರರ ಬಾಳಿಗೆ ಬೆಳಕಾಗವವಳು ಮಹಿಳೆ.
ಹೀಗೆ ಇತರರ ಬಾಳಿಗೆ ಬೆಳಕಾದ ಮಹಿಳೆಯರಲ್ಲಿ ಗೋರಖ್ಪುರ್ ಜಿಲ್ಲೆಯ ಹೇಮಲತಾ ಓಜಾ ಅವರೂ ಒಬ್ಬರು. ನಿರ್ಗತಿಕ ಮಹಿಳೆಯರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು, ತಮ್ಮ ಕೌಶಲ್ಯ ಮತ್ತು ಸಮಾಜ ಸೇವೆಯ ಮೂಲಕ ಇಂದು ಅನೇಕ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಇವರು ಕೌಟುಂಬಿಕ ಪರಿಸ್ಥಿತಿಯಿಂದ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ಅದೆಷ್ಟೋ ಮಹಿಳೆಯರಿಗೆ ಸರಿಯಾದ ದಾರಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕಿರುಕುಳಕ್ಕೆ ಒಳಗಾಗಿರುವ ಮಹಿಳೆಯರನ್ನು ರಕ್ಷಿಸಿ, ಕಾನೂನು ನೆರವು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.
ಹೇಮಲತಾ ಓಜಾ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಆದರೂ ತಮ್ಮ ಸ್ವಪ್ರಯತ್ನದಿಂದ ಸಾಧನೆ ಮಾಡಿ ಇಂದು ನೂರಾರು ಮಹಿಳೆಯರಿಗೆ ಆಸರೆಯಾಗಿದ್ದಾರೆ. ಇವರ ಈ ಸಮಾಜ ಸೇವೆಯನ್ನು ಗುರುತಿಸಿ ಹಲವು ದೊಡ್ಡ ವೇದಿಕೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಇನ್ನು ಓದು ಮತ್ತು ಬರಹದಲ್ಲಿ ಆಸಕ್ತಿ ಹೊಂದಿರುವ ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಜಡ್ಜ್ ಆಗಬೇಕೆಂಬ ಕನಸಿತ್ತು: ಪದವಿ ವ್ಯಾಸಂಗ ಮುಗಿಸಿ ಮದುವೆಯಾದ ಹೇಮಲತಾ ಅವರಿಗೆ ಎಲ್ಎಲ್ ಬಿ ಓದಿ ಜಡ್ಜ್ ಆಗಬೇಕು ಎಂಬ ಕನಸಿತ್ತು. ಆದರೆ ಮದುವೆಯ ನಂತರ ತಮ್ಮ ವೈಯಕ್ತಿಕ ಕಾರಣಗಳಿಂದ ಕನಸನ್ನು ಈಡೇರಿಸಿಕೊಳ್ಳಲು ಇವರಿಗೆ ಸಾಧ್ಯವಾಗಲಿಲ್ಲ. ಇನ್ನು ತಮ್ಮ ಸ್ವಗ್ರಾಮವನ್ನು ತೊರೆದ ಇವರ ಕುಟುಂಬ ನಗರಕ್ಕೆ ಬಂದು ಜೀವನ ಶುರು ಮಾಡಿದ್ದರು. ಇಲ್ಲಿ ಇವರ ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಪದವಿ ವ್ಯಾಸಂಗ ಮಾಡಿದ್ದ ಹೇಮಲತಾ ಅವರಿಗೆ ಸುಮ್ಮನೆ ಕೂರಲು ಮನಸ್ಸಾಗಲಿಲ್ಲ. ಹೀಗಾಗಿ ಹೇಮಲತಾ ಅವರು ಕೆಲವರ ಸಹಕಾರದಿಂದ ಕರಕುಶಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿ ಇಂದು ಅವರ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಅಷ್ಟೇ ಅಲ್ಲದೆ ತಮ್ಮ ಕರಕುಶಲ ಕೌಶಲ್ಯವನ್ನು ಇತರ ಮಹಿಳೆಯರಿಗೆ ಹೇಳಿಕೊಡುವ ಮೂಲಕ ಅವರನ್ನೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದಾರೆ. ಇನ್ನು ಬರವಣಿಯಲ್ಲೂ ತೊಡಗಿಸಿಕೊಂಡಿರುವ ಇವರು, ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.