ಗೋರಖ್‌ಪುರ(ಉತ್ತರ ಪ್ರದೇಶ):ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಯುವತಿಯೊಬ್ಬರು ದೂರು ನೀಡಿದರೂ, ರಾಜಕೀಯದ ಒತ್ತಡದಿಂದ ಪೊಲೀಸರು ಕೇಸ್ ದಾಖಲಿಸಿಕೊಳ್ಳದೇ ಪ್ರತಿಯಾಗಿ ಆಕೆಯ ಕುಟುಂಬದ ವಿರುದ್ಧವೇ ಕೊಲೆ ಯತ್ನ ಆರೋಪ ಹೊರಿಸಿದ್ದಾರೆ. ನಾಮ್ಕೇವಾಸ್ತೆ ಎಂಬಂತೆ ಕಿರುಕುಳ ಕೇಸ್ ಮಾತ್ರ ದಾಖಲಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೋರಖ್ಪುರದಲ್ಲಿ.
ಪ್ರಕರಣವೇನು?:ಗೋರಖ್ಪುರದ ಪಿಪರಾಯಿಚ್ ಎಂಬ ಗ್ರಾಮದಲ್ಲಿ ಡಿಸೆಂಬರ್ 15 ರಂದು ತಡರಾತ್ರಿ ರಾಜಕೀಯ ಪಕ್ಷಕ್ಕೆ ಸೇರಿದ ಪ್ರಭಾವಿಗಳಿಬ್ಬರು ಯುವತಿಯ ಮನೆಗೆ ನುಗ್ಗಿದ್ದಾರೆ. ಬಳಿಕ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಯುವತಿ ಇದನ್ನು ವಿರೋಧಿಸಿದಾಗ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಮನೆಯವರು ಗಲಾಟೆ ಮಾಡಿದಾಗ ಓರ್ವ ಅಲ್ಲಿಂದ ಪರಾಗಿಯಾಗಿದ್ದಾನೆ. ಇನ್ನೊಬ್ಬ ಕುಟುಂಬಸ್ಥರಿಗೆ ಸಿಕ್ಕಿಬಿದ್ದಿದ್ದಾನೆ.
ಗಲಾಟೆ ಸದ್ದು ಕೇಳಿ ನೆರೆಹೊರೆಯವರು ಬಂದು ವಿಷಯ ತಿಳಿದು ಆರೋಪಿಯನ್ನು ಥಳಿಸಿದ್ದಾರೆ. ಬಳಿಕ ಯುವತಿ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಮರುದಿನ ಯುವತಿ ಮತ್ತು ಆಕೆಯ ಕುಟುಂಬಸ್ಥರು ಠಾಣೆಗೆ ದೂರು ನೀಡಲು ಬಂದಿದ್ದಾರೆ. ಆದರೆ, ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಅಲ್ಲದೇ, ಆರೋಪಿಗಳು ಪ್ರಭಾವಿಗಳಾಗಿದ್ದ ಕಾರಣ ರಾಜೀ ಸಂಧಾನಕ್ಕೆ ಪೊಲೀಸರೇ ಸೂಚಿಸಿದ್ದಾರೆ. ಸಂತ್ರಸ್ತೆ ಕುಟುಂಬಸ್ಥರು ಇದನ್ನು ನಿರಾಕರಿಸಿದ್ದಾರೆ. ಒಂದು ವಾರ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದಾಗ ಸಂತ್ರಸ್ತೆಯ ಕುಟುಂಬ ಎಡಿಜಿಗೆ ದೂರು ನೀಡಿದ್ದಾರೆ.
ಎಡಿಜಿ ಮಧ್ಯಪ್ರವೇಶದ ಬಳಿಕ ಪೊಲೀಸರು ಡಿಸೆಂಬರ್ 22 ರಂದು ಸಾಮೂಹಿಕ ಅತ್ಯಾಚಾರದ ಬದಲಿಗೆ ಕಿರುಕುಳದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬಳಿಕ ಪ್ರಕರಣದ ತನಿಖೆ ನಡೆಸುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಬಂದ ಪೊಲೀಸರು ಯುವತಿ ಮತ್ತು ಆಕೆಯ ಕುಟುಂಬಕ್ಕೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಶಾಸಕನ ಮೇಲೆ ಸಂತ್ರಸ್ತೆ ಆರೋಪ:ಪ್ರಕರಣ ಆರೋಪಿಗಳು ಸ್ಥಳೀಯ ಶಾಸಕನ ಬೆಂಬಲಿಗರಾಗಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರು ಪ್ರಕರಣದ ಮೇಲೆ ಒತ್ತಡ ಹೇರಿದ್ದರಿಂದ ಅತ್ಯಾಚಾರ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ. ಮೇಲಧಿಕಾರಿಗಳ ಸೂಚನೆಯ ಬಳಿಕ ಕಿರುಕುಳ ಕೇಸ್ ದಾಖಲಿಕೊಂಡ ಮರುದಿನ, ಸಂತ್ರಸ್ತೆಯ ಕುಟುಂಬದ ವಿರುದ್ಧವೇ ಪೊಲೀಸರು ಕೊಲೆ ಯತ್ನ ಕೇಸ್ ದಾಖಲಿದ್ದಾರೆ.
ಊರಲ್ಲಿರದ ತಂದೆ ಕೇಸಲ್ಲಿ ಆರೋಪಿ:ರಾಜಕೀಯ ಒತ್ತಡದಿಂದ ಪೊಲೀಸರು ಸಂತ್ರಸ್ತೆಯ ತಂದೆ, ಸಹೋದರರು ಸೇರಿದಂತೆ 12 ಜನರ ವಿರುದ್ಧ ಕೊಲೆ ಯತ್ನ ಆರೋಪದಡಿ ಕೇಸ್ ಜಡಿದಿದ್ದಾರೆ. ಅತ್ಯಾಚಾರ ನಡೆದು, ರೆಡ್ಹ್ಯಾಂಡ್ ಆಗಿ ಆರೋಪಿಯನ್ನು ಹಿಡಿದುಕೊಟ್ಟರೂ ಪೊಲೀಸರು ತಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದು ಸಂತ್ರಸ್ತೆ ಕುಟುಂಬಸ್ಥರನ್ನು ಕಂಗಾಲಾಗಿಸಿದೆ. ವಿಚಿತ್ರ ಅಂದರೆ ದೂರದಲ್ಲೆಲ್ಲೋ ಕೆಲಸ ಮಾಡಿ ಕುಟುಂಬವನ್ನು ಸಲುಹುವ ತಂದೆಯನ್ನೂ ಈ ಕೇಸ್ನಲ್ಲಿ ಪೊಲೀಸರು ಆರೋಪಿಯನ್ನಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನದ ಬಳಿಕವೂ ಸಂತ್ರಸ್ತೆಯ ತಂದೆ ಸೇರಿದಂತೆ ಸಹೋದರ ಮನೆಯಲ್ಲಿ ಇರಲಿಲ್ಲ. ಆದರೆ, ಪೊಲೀಸರು ಶಾಸಕನ ಒತ್ತಡಕ್ಕೆ ಮಣಿದು ನಮ್ಮ ವಿರುದ್ಧ ಕೊಲೆ ಯತ್ನದ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿದ್ದಾರೆ. ಎರಡೂ ಕಡೆಯಿಂದ ದೂರು ಸ್ವೀಕರಿಸಲಾಗಿದೆ. ಇದರ ಆಧಾರದ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಸಾಮೂಹಿಕ ಅತ್ಯಾಚಾರದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ:ಬೆಳಗಾವಿಯಲ್ಲಿ ಹರಿದ ನೆತ್ತರು.. ಹೊನಲು ಬೆಳಕಿನ ಕಬಡ್ಡಿ ಆಡುತ್ತಿದ್ದ ಇಬ್ಬರು ಯುವಕರ ಬರ್ಬರ ಕೊಲೆ