ಲಖನೌ: ಉತ್ತರಪ್ರದೇಶದ ಗೋರಖ್ಪುರ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನಲ್ಲಿ 26 ವರ್ಷದ ವೈದ್ಯಕೀಯ ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿದ್ದು, ಅದೃಷ್ಟವಶಾತ್ ಆತ ಬದುಕುಳಿದಿರುವ ಘಟನೆ ಸೋಮವಾರ ನಡೆದಿದೆ. ತಕ್ಷಣಕ್ಕೆ ಆತನ ಆರೋಗ್ಯ ಸ್ಥಿತಿ ಗಮನಿಸಿದ ಏಮ್ಸ್ ವೈದ್ಯರು ಉತ್ತಮ ಚಿಕಿತ್ಸೆಗೆ ಆತನನ್ನು ಫಾತಿಮಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಶಾಂಕ್ ಏಮ್ಸ್ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಂಗಳವಾರ ಅಂಜಿಯೊಗ್ರಾಫಿ ಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.
ಏನಿದು ಪ್ರಕರಣ?: 2019ರ ಗೋರಖ್ಪುರ ಏಮ್ಸ್ನ ಮೊದಲ ಎಂಬಿಬಿಎಸ್ ಬ್ಯಾಚಿನ ವಿದ್ಯಾರ್ಥಿ ಶಶಾಂಕ್ ಶೇಖರ್ ಆಗಿದ್ದಾರೆ. ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಇವರು ಸೋಮವಾರ ಹಾಸ್ಟೆಲ್ ರೂಮ್ನಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣಕ್ಕೆ ಅವರ ಸಹಪಾಠಿ ಒಪಿಡಿಗೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ವೈದ್ಯ ಕನಿಷ್ಕಾ ಅವರನ್ನು ತಪಾಸಣೆ ಮಾಡಿದ್ದು, ಇಸಿಜಿಗೆ ಒಳಪಡಿಸಿದಾಗ ಅವರಿಗೆ ಹೃದಯಘಾತ ಆಗಿರುವುದು ದೃಢಪಟ್ಟಿದೆ. ಅವರನ್ನು ಏಮ್ಸ್ನ ತುರ್ತು ಘಟಕಕ್ಕೆ ದಾಖಲಿಸಿದ್ದಾರೆ. ಈ ವೇಳೆ ಉತ್ತಮ ಚಿಕಿತ್ಸೆಗೆ ಫಾತಿಮಾ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಫಾತಿಮಾ ಆಸ್ಪತ್ರೆಯ ಡಾ ಲೋಕೇಶ್ ಗುಪ್ತಾ ಮೇಲ್ವಿಚಾರಣೆಯಲ್ಲಿ ಸದ್ಯ ವಿದ್ಯಾರ್ಥಿ ಆರೋಗ್ಯ ಚೇತರಿಕೆ ಕಂಡಿದೆ.
ಸೋಮವಾರ ಏಮ್ಸ್ನಲ್ಲಿ ಮತ್ತಿಬ್ಬರು ರೋಗಿಗಳು ಕೂಡ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ಸಿಪಿಆರ್ ಮತ್ತು ವೆಂಟಿಲೇಟರ್ ಚಿಕಿತ್ಸೆ ನೀಡಿದರೂ ಅವರು ಬದುಕಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕುರಿತು ಕೂಡ ಸಿಬ್ಬಂದಿ ಧ್ವನಿಯನ್ನು ಎತ್ತಿದ್ದಾರೆ.