ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಈ ವರ್ಷದ ಜನವರಿಯಲ್ಲಿ 12,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಟೆಕ್ ದೈತ್ಯ ಕಂಪನಿ ಗೂಗಲ್ ಇದೀಗ ಮತ್ತಷ್ಟು ವೆಚ್ಚ ಕಡಿತ ಮಾಡಲು ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಉದ್ಯೋಗಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸ್ನಾಕ್ಸ್ ಮತ್ತು ವರ್ಕೌಟ್ ತರಗತಿಗಳು ಸೇರಿದಂತೆ ಇತರೆ ಅನೇಕ ವೆಚ್ಚಗಳನ್ನು ಕಡಿತಗೊಳಿಸಿ ಕೃತಕ ಬುದ್ಧಿಮತ್ತೆಗೆ(AI) ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಗೂಗಲ್ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್, "ಕಂಪನಿಯು ಉದ್ಯೋಗಿಗಳಿಗೆ ಮಾಡುತ್ತಿರುವ ವೆಚ್ಚ ಸಾಕಷ್ಟು ದುಬಾರಿಯಾಗುತ್ತಿದೆ. ಪರಿಣಾಮವಾಗಿ, ಕೆಲವು ವೆಚ್ಚಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಉಚಿತ ತಿಂಡಿಗಳು, ಲಾಂಡ್ರಿ ಸೇವೆ, ಮಸಾಜ್ ಮತ್ತು ಮೈಕ್ರೋ ಕಿಚನ್ ಸೇವೆಯನ್ನು ತೆಗೆದು ಹಾಕಲಾಗುತ್ತಿದೆ. ಇದರ ಜೊತೆಗೆ, ವೆಚ್ಚ ಉಳಿತಾಯ ಮಾಡಲು ಗೂಗಲ್ ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ. ಈ ವೆಚ್ಚ ಕಡಿತ ಅನಿವಾರ್ಯ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮೊಬೈಲ್ ಗೇಮ್ ಸ್ಟೋರ್ ಅಭಿವೃದ್ಧಿಪಡಿಸಿ ಆ್ಯಪಲ್, ಗೂಗಲ್ ವಿರುದ್ಧ ಮೈಕ್ರೋಸಾಫ್ಟ್ ಸ್ಪರ್ಧೆ
ಶುಕ್ರವಾರ ಗೂಗಲ್ ಉದ್ಯೋಗಿಗಳಿಗೆ ಜ್ಞಾಪಕ ಪತ್ರವನ್ನು ಕಳುಹಿಸಲಾಗಿದೆ. ಇದರಲ್ಲಿ ಕಂಪನಿಯು ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ ಹಣವನ್ನು ಸಮರ್ಥವಾಗಿ ಬಳಸುವ ಸಮಯ ಬಂದಿದೆ. ಹಾಗಾಗಿ, ತಂಡಗಳನ್ನು ಮರುಹಂಚಿಕೆ ಮಾಡಲಾಗುವುದು. ಇದರ ಜೊತೆಗೆ, ಲ್ಯಾಪ್‌ಟಾಪ್‌ಗಳಂತಹ ವೈಯಕ್ತಿಕ ಸಾಧನಗಳ ಮೇಲೆ ಖರ್ಚು ಮಾಡುವುದನ್ನು ನಿಲ್ಲಿಸಲಾಗುವುದು. ಫಿಟ್‌ನೆಸ್ ಕ್ಲಾಸ್ ವೇಳಾಪಟ್ಟಿಗಳನ್ನು ಸಹ ಬದಲಾಯಿಸಲಾಗುತ್ತದೆ ಎಂದು ಸೂಚನೆ ಕೊಟ್ಟಿದೆ.