ನವದೆಹಲಿ: ಸರ್ಚ್ ಎಂಜಿನ್ ಗೂಗಲ್ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಇದು ಆಗಾಗ ಜಗತ್ತಿನ ಕೆಲ ಅಪರೂಪದ ಸಂಗತಿಗಳು, ಗಣ್ಯರ ಜನ್ಮದಿನಗಳನ್ನು ಸರ್ಚ್ ಎಂಜಿನ್ ಮುಖಪುಟದಲ್ಲಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುತ್ತದೆ. ಇಂದೂ ಸಹ ಗೂಗಲ್ ತನ್ನ ಡೂಡಲ್ನಲ್ಲಿ 'ದಿ ಗ್ರೇಟ್ ಗಾಮಾ' ಎಂದು ಜನಪ್ರಿಯರಾಗಿರುವ ಗಾಮಾ ಪೆಹಲ್ವಾನ್ ಅವರ ಜನ್ಮದಿನವನ್ನು ಸ್ಮರಿಸಿ, ಸಾಧನೆಗೆ ವಿಶೇಷ ಗೌರವ ಸಲ್ಲಿಸಿದೆ.
ಸ್ವಾತಂತ್ರ್ಯಪೂರ್ವ ಭಾರತದ ಅತ್ಯಂತ ಪ್ರಸಿದ್ಧ ಕುಸ್ತಿಪಟುಗಳಲ್ಲಿ ಗಾಮಾ ಪೆಹಲ್ವಾನ್ ಒಬ್ಬರು. 1878ರಲ್ಲಿ ಪಂಬಾಜ್‌ನ ಅಮೃತಸರದಲ್ಲಿ ಗುಲಾಮ್ ಮೊಹಮ್ಮದ್ ಬಕ್ಷ್ ಬಟ್ ಆಗಿ ಜನಿಸಿದ ಇವರು ಮೂಲತಃ ಕುಸ್ತಿಪಟು ಕುಟುಂಬದವರು. ಸೋಲನ್ನೇ ಕಾಣದ ಈ ಪರಾಕ್ರಮಿ ಬ್ರೂಸ್ ಲೀ ಗೆ ಪ್ರೇರಣೆಯಂತೆ.
ಅಜೇಯ ವಿಶ್ವ ಕುಸ್ತಿಪಟು ಗಾಮಾ ಪೆಹಲ್ವಾನ್ ಅವರನ್ನು 'ದಿ ಗ್ರೇಟ್ ಗಾಮಾ' ಹಾಗು 'ರುಸ್ತಮ್-ಎ-ಹಿಂದ್' ಎಂದೂ ಕೂಡ ಕರೆಯಲಾಗುತ್ತದೆ. ಯಾಕೆಂದರೆ, ಕುಸ್ತಿಯನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದ ಗಾಮಾ ಎಂದೂ ಸೋತೇ ಇಲ್ಲ. ಅಖಾಡಕ್ಕಿಳಿದರೆ ಎದುರಾಳಿ ಯಾರೇ ಇದ್ದರೂ ಜಯ ಮಾತ್ರ ಗಾಮಾನದ್ದೇ ಆಗಿರುತ್ತಿತ್ತು. ಅಷ್ಟೇ ಅಲ್ಲ, ಅವರಿಗೆ 1910ರಲ್ಲಿ ವಿಶ್ವ ಹೆವಿವೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಗಾಮಾ ತನ್ನ ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಲು ಗುಣಮಟ್ಟದ ಪೌಷ್ಟಿಕ ಆಹಾರವನ್ನು ಸೇವಿಸುತ್ತಿದ್ದರು. 10ನೇ ವಯಸ್ಸಿನಲ್ಲಿ 500 ಲಂಗ್ಸ್ ಮತ್ತು 500 ಪುಷ್ ಅಪ್‌ಗಳನ್ನು ಹೊಡೆಯುತ್ತಿದ್ದರಂತೆ. 1888ರಲ್ಲಿ ವಿಶ್ವಾದ್ಯಂತ ಸುಮಾರು 400ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದ ಲುಂಜ್ ಸ್ಪರ್ಧೆ ಗೆದ್ದು, ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಗಳಿಸಿದ್ದರು. 1902ರಲ್ಲಿ 1,200 ಕೆ.ಜಿ ಕಲ್ಲನ್ನು ಎತ್ತಿರುವುದು ಇವರ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದು. ವೇಲ್ಸ್ ರಾಜಕುಮಾರ ಭಾರತಕ್ಕೆ ಭೇಟಿ ನೀಡಿದಾಗ ಗಾಮಾ ಅವರ ಶಕ್ತಿಯನ್ನು ಕಂಡು ಬೆರಗಾಗಿ ಬೆಳ್ಳಿ ಗದೆ ನೀಡಿದ್ದರು. ಗಾಮಾ ತಮ್ಮ ಬದುಕಿನ ಕೊನೆಯ ದಿನಗಳನ್ನು ಲಾಹೋರ್‌ನಲ್ಲಿ ಕಳೆದು, 1960ರಲ್ಲಿ ನಿಧನರಾದರು.
ಇದನ್ನೂ ಓದಿ:ಡಿಆರ್ಎಸ್ ಪಡೆಯದೆ ಎಡವಿದ ಡೆಲ್ಲಿ: ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಪಂತ್