ಭೋಪಾಲ್:ಭೋಪಾಲ್ನ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಗೂಗಲ್ ಕಂಪನಿ ಮ್ಯಾನೇಜರ್ ಆಗಿರುವ ಯುವಕನನ್ನು ಒತ್ತೆಯಾಗಿಟ್ಟು, ಆತನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗ ಅದೇ ಯುವತಿ ಯುವಕನಿಗೆ ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಅಚ್ಚರಿಯ ಪ್ರಕರಣವೊಂದು ಭೋಪಾಲ್ನ ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕಮಲನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೂರುದಾರ ಯುವಕನ ಹೆಸರು ಗಣೇಶ್ ಶಂಕರ್ ಗೋಪಾಲನ್. ಈತ ಭೋಪಾಲ್ನ ಕಸ್ತೂರ್ಬಾ ನಗರ ಗೋವಿಂದಪುರ ನಿವಾಸಿ. ಬೆಂಗಳೂರಿನಲ್ಲಿ ಗೂಗಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ ಏನು?:ಯುವಕ ದೂರಿನಲ್ಲಿ, ತಾನು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ನಲ್ಲಿ ಓದುತ್ತಿದ್ದಾಗ ಆ ಯುವತಿಯನ್ನು ಭೇಟಿಯಾಗಿದ್ದೆ. ಆಗ ಪರಿಚಯವಾಗಿದ್ದ ಹುಡುಗಿ ತನ್ನನ್ನು ಮದುವೆಯಾಗಲು ಬಯಸಿದ್ದಳು. ಆದರೆ, ಯುವತಿಯನ್ನು ಮದುವೆಯಾಗಲು ನಾನು ನಿರಾಕರಿಸಿದ್ದೆನು. ಅದರ ನಂತರ ಅವರ ತಂದೆ 2020ರಲ್ಲಿ ನನ್ನ ಪೋಷಕರ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದರು. ಆಗಲೂ ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಬಳಿಕ ಯುವತಿಯ ಕಡೆಯವರು ಯುವಕನಿಗೆ ಮದುವೆಯಾಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ಯುವಕ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
ಒಟ್ಟಾರೆ ಆಗಿದ್ದೇನು?:ಇದಾದ ಎರಡು ವರ್ಷಗಳ ಬಳಿಕ 2022ರ ಜೂನ್ನಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಯುವತಿ ಕೊನೆಯ ಬಾರಿಗೆ ತನ್ನನ್ನು ಭೋಪಾಲ್ಗೆ ಬಂದು ಭೇಟಿಯಾಗುವಂತೆ ಕರೆ ಮಾಡಿ ಹೇಳಿದ್ದಳಂತೆ. ಅದರಂತೆ ಗಣೇಶ್ ಭೋಪಾಲ್ಗೆ ಬಂದಿದ್ದಾನೆ. ಭೋಪಾಲ್ ವಿಮಾನ ನಿಲ್ದಾಣದಲ್ಲಿ ಇಳಿದ ಗಣೇಶ್ನನ್ನು ಯುವತಿಯ ಸೋದರ ಮಾವ ಹಾಗೂ ಸಹೋದರ ಕರೆದುಕೊಂಡು ಹೋಗಿ ನೆಹರು ನಗರ ಫ್ಲ್ಯಾಟ್ ಒಂದರಲ್ಲಿ ಕೂಡಿ ಹಾಕಿದ್ದಾರೆ.