ವಾರಣಾಸಿ(ಉತ್ತರ ಪ್ರದೇಶ):ಒಡಿಶಾದಲ್ಲಿ ತ್ರಿವಳಿ ರೈಲುಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ 293 ಜನರು ಮೃತಪಟ್ಟ ಘಟನೆ ನಡೆದಿತ್ತು. ಇದಾದ ಬಳಿಕ ಹಲವೆಡೆ ಹಳಿ ತಪ್ಪಿ ಗೂಡ್ಸ್ ರೈಲುಗಳು ಅಪಘಾತಕ್ಕೀಡಾದ ವರದಿಗಳು ಬಂದಿವೆ. ಇಂದು ಕೂಡ ಅಂಥಹದ್ದೇ ವಿದ್ಯಮಾನ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜರುಗಿದೆ. ಜಿಲ್ಲೆಯ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ಗೂಡ್ಸ್ ರೈಲು ಹಳಿ ತಪ್ಪಿದೆ. ಗೂಡ್ಸ್ ರೈಲಿನ ಏಳು ಬೋಗಿಗಳು ಹಳಿ ತಪ್ಪಿದವು. ಈ ವೇಳೆ ಉಂಟಾದ ಭಾರಿ ಶಬ್ದದಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು. ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು.
ರೈಲ್ವೆ ಹಳಿಗೂ ಹಾನಿ:ಗೂಡ್ಸ್ ರೈಲು ಮಧ್ಯಪ್ರದೇಶದ ಸತ್ನಾದಿಂದ ಪ್ರಯಾಗರಾಜ್ ಮೂಲಕ ಡಿಯೋರಿಯಾಕ್ಕೆ ಹೋಗುತ್ತಿತ್ತು. ಗೂಡ್ಸ್ ರೈಲು 3ನೇ ಪ್ಲಾಟ್‌ಫಾರ್ಮ್ ಮೂಲಕ ಹಾದು ಹೋಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಅವಘಡದಲ್ಲಿ ರೈಲ್ವೆ ಹಳಿಗೂ ಹಾನಿಯಾಗಿದೆ. ರೈಲ್ವೆ ಆಡಳಿತದ ಮಾಹಿತಿ ಪ್ರಕಾರ, ಮಧ್ಯಪ್ರದೇಶದ ಸತ್ನಾದಿಂದ ಸಿಮೆಂಟ್ ಹೊತ್ತ ಗೂಡ್ಸ್ ರೈಲು ಹೊರಟಿತ್ತು. ಗೂಡ್ಸ್ ರೈಲು ಪ್ರಯಾಗರಾಜ್ ಮೂಲಕ ಡಿಯೋರಿಯಾಕ್ಕೆ ಹೋಗುತ್ತಿತ್ತು.
ವಾರಣಾಸಿ ಕ್ಯಾಂಟ್ ರೈಲು ನಿಲ್ದಾಣದ 3ನೇ ಪ್ಲಾಟ್‌ಫಾರ್ಮ್ ಮೂಲಕ ಗೂಡ್ಸ್ ರೈಲು ಹಾದು ಹೋಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಗೂಡ್ಸ್ ರೈಲಿನ ಏಳು ಬೋಗಿಗಳು ಒಂದರ ಹಿಂದೆ ಒಂದರಂತೆ ಹಳಿ ತಪ್ಪಿದವು. ಸದ್ದು ಜೋರಾಗಿದ್ದು ನಿಲ್ದಾಣದ ಆವರಣದಲ್ಲಿದ್ದ ಪ್ರಯಾಣಿಕರು ಭಯಭೀತರಾದರು. ಅಪಘಾತದಲ್ಲಿ ರೈಲ್ವೆ ಹಳಿಗೂ ಹಾನಿಯಾಗಿದೆ. ಅವಘಡದ ನಂತರ, ರೈಲ್ವೆ ಅಧಿಕಾರಿಗಳು ಮತ್ತು ಎಆರ್‌ಟಿ ತಂಡ ಹಳಿ ತಪ್ಪಿದ ಬೋಗಿಗಳನ್ನು ಮತ್ತೆ ಹಳಿಗೆ ತರಲು ಪ್ರಯತ್ನಿಸಿದರು.