ಅಂಗುಲ್ (ಒಡಿಶಾ): ಗುಡ್ಡದ ಮೇಲಿಂದ ಬಂಡೆಯೊಂದು ಇಂಜಿನ್ ಮೇಲೆ ಬಿದ್ದ ಕಾರಣ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಬುಧವಾರ ಬೆಳಗ್ಗೆ ಅಂಗುಲ್ ಜಿಲ್ಲೆಯ ಬೋಯಿಂಡಾ ಬಳಿ ನಡೆದಿದೆ. ಮೂಲಗಳ ಪ್ರಕಾರ ಗೂಡ್ಸ್ ರೈಲು ತಾಲ್ಚೆರ್‌ನಿಂದ ಸಂಬಲ್‌ಪುರಕ್ಕೆ ತೆರಳುತ್ತಿದ್ದ ವೇಳೆ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಮಣ್ಣು ಮೆದುವಾಗಿ ಗುಡ್ಡದ ಮೇಲಿಂದ ದೈತ್ಯ ಬಂಡೆ ಕಲ್ಲು ಹಳಿ ಮೇಲೆ ಹಾಗೂ ರೈಲಿನ ಇಂಜಿನ್ ಮೇಲೆ ಬಿದ್ದಿದೆ.
ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಲೋಕೋ ಪೈಲಟ್ ಹಾಗೂ ಇತರ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲು ಹಳಿ ತಪ್ಪಿದ ಕಾರಣ ಅಂಗುಲ್ ಮತ್ತು ಸಂಬಲ್ಪುರ ನಡುವಿನ ಇತರ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಂಬಲ್‌ಪುರ ಡಿಆರ್‌ಎಂ ಸೇರಿದಂತೆ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಅಂಗುಲ್‌ನಲ್ಲಿ ಮಳೆ ಮುಂದುವರಿದಿದ್ದು, ತೆರವು ಕಾರ್ಯಾಚಾರಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.
ನಿಲ್ದಾಣದಲ್ಲೇ ಹಳಿ ತಪ್ಪಿದ್ದ ರೈಲು:ಚಲಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿತ್ತು. ಗೂಡ್ಸ್ ರೈಲಿನ ಏಳು ಬೋಗಿಗಳು ಹಳಿ ತಪ್ಪಿದ್ದು, ಈ ವೇಳೆ ಉಂಟಾಗಿದ್ದ ಭಾರೀ ಶಬ್ಧದಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಭಯಭೀತಗೊಂಡಿದ್ದರು. ಮಧ್ಯ ಪ್ರದೇಶದ ಸತ್ನಾದಿಂದ ಪ್ರಯಾಗ್ರಾಜ್ಗೆ ಮೂಲಕ ಡಿಯೋರಿಯಾಗೆ ತೆರಳುತ್ತಿದ್ದ ಸಿಮೆಂಟ್ ಹೊತ್ತ ಗೂಡ್ಸ್ ರೈಲು ಕ್ಯಾಂಟ್ ರೈಲು ನಿಲ್ದಾಣದ ಮೂರನೇ ಫ್ಲಾಟ್ಫಾರ್ಮ್ ಮೂಲಕ ಹಾದು ಹೋಗುತ್ತಿತ್ತು.
ರೈಲು ನಿಲ್ದಾಣ ತಲುಪುತ್ತಿದ್ದಂತೆ ಇದ್ದಕ್ಕಿಂದಂತೆ ರೈಲಿನ ಏಳು ಬೋಗಿಗಳು ಒಂದರ ಹಿಂದೆ ಒಂದರಂತೆ ಹಳಿ ತಪ್ಪಿತ್ತು. ಆ ಅವಘಡದಲ್ಲಿ ಬೋಗಿಗಳು ಹಳಿ ತಪ್ಪುವುದರ ಜೊತೆಗೆ, ರೈಲ್ವೆ ಹಳಿಗೂ ಹಾನಿಯಾಗಿತ್ತು. ಅವಘಡದ ನಂತರ ರೈಲ್ವೆ ಅಧಿಕಾರಿಗಳು ಹಾಗೂ ಎಆರ್ಟಿ ಸಿಬ್ಬಂದಿ ರೈಲು ಬೋಗಿಗಳನ್ನು ಹಳಿಗೆ ತರುವ ಪ್ರಯತ್ನ ಮಾಡಿದ್ದರು. ಕ್ಯಾಂಟ್ ನಿಲಗ್ದಾಣದ ಲೋಹ್ತಾ ಕೊನೆಯಲ್ಲಿ ರೈಲು ಹಳಿ ತಪ್ಪಿದ್ದ ಕಾರಣ ಕೆಲವು ರೈಲುಗಳ ಸಂಚಾರಕ್ಕೆ ಅಡಚನೆಯಾಗಿತ್ತು. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿತ್ತು.
ಇದನ್ನೂ ಓದಿ:ವಾರಣಾಸಿ ಜಂಕ್ಷನ್‌ನಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು.. ಭಾರಿ ಶಬ್ದದಿಂದ ಗಾಬರಿಗೊಂಡ ಪ್ರಯಾಣಿಕರು