ಡೆಹ್ರಾಡೂನ್ (ಉತ್ತರಾಖಂಡ): ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ, ಗೋಲ್ಡನ್ ಬಾಯ್ ನೀರಜ್ ಚೋಪ್ರಾ ದೀಪಾವಳಿಗೂ ಮುನ್ನ ಉತ್ತರಾಖಂಡಕ್ಕೆ ಆಗಮಿಸಿದ್ದಾರೆ. ರಾಜಧಾನಿ ಡೆಹ್ರಾಡೂನ್‌ನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ನೀರಜ್ ಚೋಪ್ರಾ ಇಡೀ ಕುಟುಂಬದೊಂದಿಗೆ ತುಂಬಾ ಹೊತ್ತು ಸಮಯ ಕಳೆದರು.
ಡಿಜಿಪಿ ಅಶೋಕ್ ಕುಮಾರ್ ಅವರನ್ನು ನೀರಜ್ ಚೋಪ್ರಾ ತಮ್ಮ ಮಾಮ ಎಂದು ಪರಿಗಣಿಸುತ್ತಾರೆ. ಇದಕ್ಕೂ ಮುನ್ನ ಕೂಡ ಅವರ ಮನೆಗೆ ಹಲವು ಬಾರಿ ಭೇಟಿ ನೀಡಿದ್ದರು. ಅಶೋಕ್ ಕುಮಾರ್ ಅವರಿಗಾಗಿ ನೀರಜ್ ಚೋಪ್ರಾ ಹರಿಯಾಣದ ತಮ್ಮ ಪೂರ್ವಜರ ಮನೆ ಸೋನಿಪತ್‌ನಿಂದ ದೇಸಿ ತುಪ್ಪವನ್ನು ತಂದಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಖುದ್ದು ಡಿಜಿಪಿ ಅವರೇ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
''ನೀರಜ್ ಚೋಪ್ರಾ ಅವರು ತಮ್ಮ ತರಬೇತಿಯಿಂದ ವಿರಾಮ ತೆಗೆದುಕೊಂಡು ದೀಪಾವಳಿ ಆಚರಿಸಲು ಬಹಳ ಸಮಯದ ನಂತರ ತಮ್ಮ ಊರಿಗೆ ಬಂದಿದ್ದಾರೆ. ಈ ವಿರಾಮದ ಸಮಯದಲ್ಲಿ ಡೆಹ್ರಾಡೂನ್‌ನಲ್ಲಿರುವ ನಮ್ಮ ಮನೆಗೂ ನೀರಜ್ ಬಂದಿದ್ದರು. ನಮ್ಮೊಂದಿಗೆ ಕೆಲವು ಸ್ಮರಣೀಯ ಕುಟುಂಬ ಕ್ಷಣಗಳನ್ನು ಕಳೆದರು. ನೀರಜ್ ಊರಿನಿಂದ ತುಪ್ಪವನ್ನೂ ತಂದಿದ್ದರು'' ಎಂದು ಡಿಜಿಪಿ ಅಶೋಕ್ ಕುಮಾರ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.