ಹೈದರಾಬಾದ್: ಸೌರವ್ ಗಂಗೂಲಿ ಅವರ ನಂತರ ಬಿಸಿಸಿಐ ನ ಹೊಸ ಅಧ್ಯಕ್ಷರಾಗಿ ರೋಜರ್ ಬಿನ್ನಿ ನೇಮಕವಾಗಿದ್ದಾರೆ. ನಿನ್ನೆ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಈ ನೇಮಕ ಪ್ರಕಟಿಸಲಾಗಿದೆ. ಬಿಸಿಸಿಐನ ಈ ನಿರ್ಧಾರದಿಂದ ದೇಶದ ಮಹಿಳಾ ಕ್ರಿಕೆಟ್ ವಲಯದಲ್ಲಿ ಉತ್ಸಾಹದ ಅಲೆಯೊಂದು ಕಾಣಿಸಿಕೊಂಡಿದೆ. ಪುರುಷರ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮಾದರಿಯಲ್ಲಿಯೇ ಮಹಿಳೆಯರ ಐಪಿಎಲ್ ಸ್ಪರ್ಧೆ ಕೂಡ ಪ್ರತಿವರ್ಷ ನಡೆಸಿದರೆ ಒಳ್ಳೆಯದು ಎಂಬ ಸಲಹೆಗಳು ಮತ್ತು ಕಾಮೆಂಟ್‌ಗಳು ವರ್ಷಗಳಿಂದ ಕೇಳಿ ಬರುತ್ತಿವೆ.
ಇತ್ತೀಚಿನ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದಕ್ಕೆ ಅಧಿಕೃತವಾಗಿ ಹಸಿರು ನಿಶಾನೆ ತೋರಿದೆ. ಐದರಿಂದ ಆರು ತಿಂಗಳಲ್ಲಿ ಐದು ತಂಡಗಳೊಂದಿಗೆ 22 ಸ್ಪರ್ಧೆಗಳ ಸರಣಿ ನಡೆಯಲಿದೆ ಎಂದು ಹೇಳಲಾಗಿದೆ. ಈ ಸಭೆಯ ಸಿದ್ಧತೆಯ ಭಾಗವಾಗಿ, ಬಿಸಿಸಿಐ ವಿವಿಧ ರಾಜ್ಯ ಇಲಾಖೆಗಳಿಗೆ ಬರೆದ ಪತ್ರದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆ ನಿರ್ದಿಷ್ಟವಾಗಿ ಉಲ್ಲೇಖಿಸಿದೆ. ದೇಶ - ವಿದೇಶಗಳಲ್ಲಿ ಮಹಿಳಾ ಕ್ರಿಕೆಟ್ ಸ್ಪರ್ಧೆಗಳಿಗೆ ಪ್ರೇಕ್ಷಕರು ಹೆಚ್ಚಾಗುತ್ತಿರುವುದು ಸತ್ಯ. ಪತ್ರದಲ್ಲಿ ಬಿಸಿಸಿಐ ಒಂದೇ ವಿಷಯವನ್ನು ವಿಭಿನ್ನ ಪದಗಳಲ್ಲಿ ವ್ಯಕ್ತಪಡಿಸಿದೆ.
ಮಹಿಳಾ ತಂಡದ ಗಮನಾರ್ಹ ಪ್ರದರ್ಶನ:ಭಾರತ ಮಹಿಳಾ ತಂಡ 2018ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. 2020ರಲ್ಲಿ ಫೈನಲ್ ಪ್ರವೇಶಿಸಿತ್ತು. ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇಂತಹ ಗಮನಾರ್ಹ ಪ್ರದರ್ಶನದ ಮೂಲಕ ಜನಪ್ರಿಯತೆ ವಿಸ್ತರಿಸಿಕೊಳ್ಳುತ್ತಿರುವ ಯುವತಿಯರ ತಂಡ, ಆಕ್ರಮಣಕಾರಿ ಐಪಿಎಲ್ ನಿರ್ವಹಣೆಯತ್ತ ಒಲವು ತೋರಲು ಬಿಸಿಸಿಐಗೆ ಪ್ರೇರಣೆ ನೀಡಿರುವುದು ಸ್ಪಷ್ಟವಾಗಿದೆ.
ಇದು ಮಾತ್ರವಲ್ಲದೇ ಇತ್ತೀಚಿನ ಏಷ್ಯಾಕಪ್ ಟೂರ್ನಿಯಲ್ಲೂ ಹರ್ಮನ್‌ಪ್ರೀತ್ ಕೌರ್‌ರ ತಂಡ ಆಕಾಶದೆತ್ತರ ಸಾಧನೆ ಮಾಡಿ ವಿಜೃಂಭಿಸಿದೆ. ಇದುವರೆಗೆ ನಡೆದ ಎಂಟು ಬಾರಿ ಏಷ್ಯಾ ಕಪ್ ಪೈಕಿ ಏಳು ಬಾರಿ ಭಾರತದ ಮಹಿಳಾ ತಂಡ ಗೆದ್ದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾತಿನಲ್ಲಿ ಹೇಳುವುದಾದರೆ- ಮಹಿಳಾ ಕ್ರಿಕೆಟ್ ತಂಡವು ತಮ್ಮ ಪರಿಶ್ರಮ ಮತ್ತು ಕೌಶಲ್ಯದಿಂದ ಎಲ್ಲ ಭಾರತೀಯರು ಹೆಮ್ಮೆಪಡುವಂತೆ ಮಾಡಿದೆ. ಆದರೆ, ಇಷ್ಟೊಂದು ಪ್ರಶಂಸನೀಯವಾಗಿರುವ ತಂಡದ ಸದಸ್ಯರ ನೈತಿಕ ಸ್ಥೈರ್ಯ ಹೆಚ್ಚಿಸಲು ಸರ್ಕಾರ ಮತ್ತು ಬಿಸಿಸಿಐ ಏನು ಮಾಡುತ್ತಿವೆ ಎಂಬುದು ಈಗ ಪ್ರಶ್ನೆಯಾಗಿದೆ.
ಮಹಿಳಾ ಕ್ರಿಕೆಟ್ಗೆ ಪ್ರೋತ್ಸಾಹದ ಕೊರತೆ?:ಕೋಟಿಗಟ್ಟಲೆ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ದೇಶ ನಮ್ಮದು. ಇಂಥ ದೇಶದಲ್ಲೂ ಮಹಿಳಾ ಕ್ರಿಕೆಟ್ ಕ್ಷೇತ್ರ ಕನಿಷ್ಠ ಪ್ರೋತ್ಸಾಹದ ಕೊರತೆಯಿಂದ ಬಳಲುತ್ತಿದೆ. ಕೆಲ ವರ್ಷಗಳ ಹಿಂದಿನವರೆಗೂ ಮಹಿಳಾ ಕ್ರೀಕೆಟ್ ತನ್ನ ಅಸ್ತಿತ್ವಕ್ಕಾಗಿಯೇ ಹೋರಾಟ ನಡೆಸಬೇಕಾಯಿತು.