ಕರ್ನಾಟಕ

karnataka

ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ 600 ಕೋಟಿ ಅಕ್ರಮ ಪತ್ತೆ ಹಚ್ಚಿದ ಇಡಿ : ರೈಲ್ವೇ ನಿಲ್ದಾಣದಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ

By

Published : Mar 11, 2023, 10:01 PM IST

ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ ಲಾಲು ಕುಟುಂಬಕ್ಕೆ ಸೇರಿದ 1 ಕೋಟಿ ನಗದು ಚಿನ್ನಾಭರಣ ಜಪ್ತಿ- 600 ಕೋಟಿ ಅಕ್ರಮ ಪತ್ತೆ - ಹೈದರಾಬಾದ್​​ ರೈಲ್ವೇ ನಿಲ್ದಾಣದಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ

gold-worth-rs-dot-5-53-crore-seized-in-telugu-states
ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ 600 ಕೋಟಿ ಅಕ್ರಮ ಎಂದ ಇಡಿ : ರೈಲ್ವೇ ನಿಲ್ದಾಣದಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ

ಹೈದರಾಬಾದ್​/ನವದೆಹಲಿ: ರೈಲ್ವೇ ಇಲಾಖೆಯಲ್ಲಿನ ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮತ್ತಷ್ಟು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದರಲ್ಲಿ ಒಟ್ಟಾರೆ 600 ಕೋಟಿ ರೂಪಾಯಿಗಳ ಹಗರಣ ನಡೆದಿರುವುದು ಪತ್ತೆ ಹಚ್ಚಿರುವ ಅಧಿಕಾರಿಗಳು ಇಂದು ಅಘೋಷಿತ ಒಂದು ಕೋಟಿ ರೂ ನಗದು ಜಪ್ತಿ ಮಾಡಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ 2005ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿದೆ ಎಂದು ಹೇಳಲಾಗಿದೆ. ಜನರಿಗೆ ಉದ್ಯೋಗಗಳನ್ನು ನೀಡಿ ಅವರ ಜಮೀನುಗಳನ್ನು ಆಪ್ತ ಸಹಾಯಕರ ಹೆಸರಿಗೆ ನೋಂದಾಯಿಸಲಾಗಿದೆ. ನಂತರ ಅದೇ ಜಮೀನುಗಳನ್ನು ಲಾಲು ಪ್ರಸಾದ್ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸಿದ ಆರೋಪ ಇದೆ.

ಈ ಸಂಬಂಧ ಇತ್ತೀಚಿಗೆ ಲಾಲು ಪ್ರಸಾದ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ ಒಟ್ಟು 16 ಆರೋಪಿಗಳಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಅಲ್ಲದೇ, ಬಿಹಾರದ ಪಾಟ್ನಾದಲ್ಲಿರುವ ನಿವಾಸದಲ್ಲಿ ಲಾಲು, ರಾಬ್ರಿ ದೇವಿ, ಮಿಸಾ ಭಾರತಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದೇ ವೇಳೆ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​​ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು.

ಇದೀಗ ಈ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಲಾಲು ಕುಟುಂಬಕ್ಕೆ ಸೇರಿದ ಅಘೋಷಿತ ಒಂದು ಕೋಟಿ, 1900 ಯುಎಸ್​ ಡಾಲರ್​​​, 540 ಗ್ರಾಂ ಚಿನ್ನದ ಗಟ್ಟಿ ಮತ್ತು 1.5 ಕೆಜಿಗೂ ಅಧಿಕ ಚಿನ್ನಾಭರಣಗಳು, ವಿವಿಧ ಆಸ್ತಿ ದಾಖಲೆಗಳು, ಮಾರಾಟ ಪತ್ರಗಳು ಸೇರಿದಂತೆ ಹಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಜೊತೆಗೆ ಕುಟುಂಬ ಸದಸ್ಯರು ಮತ್ತು ಬೇನಾಮಿದಾರರ ಹೆಸರಿನಲ್ಲಿ ಅಕ್ರಮವಾಗಿ ಮಾಡಿರುವ ಭೂ ಬ್ಯಾಂಕ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಗ್ರಹಿಸಿರುವುದನ್ನು ಪತ್ತೆ ಹಚ್ಚಿದೆ.

ಇಷ್ಟೇ ಅಲ್ಲ, ದಾಳಿಯ ಸಂದರ್ಭದಲ್ಲಿ ಸುಮಾರು 600 ಕೋಟಿ ರೂಪಾಯಿಗಳ ಅಕ್ರಮ ಆದಾಯವನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 350 ಕೋಟಿ ರೂಪಾಯಿಗಳ ಸ್ಥಿರ ಆಸ್ತಿ ಮತ್ತು ವಿವಿಧ ಬೇನಾಮಿದಾರರ ಮೂಲಕ 250 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರೈಲ್ವೇ ನಿಲ್ದಾಣದಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ

ರೈಲ್ವೇ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ :ಇದು ಬಿಹಾರದ ಕಥೆ ಆದರೆ,ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಒಟ್ಟು ಮೂವರು ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬಂಧಿಸಿದ್ದಾರೆ. ಮಾರ್ಚ್​ 8 ಮತ್ತು 9 ರಂದು ರೈಲಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಬಂಧಿತ ಮೂವರು ಆರೋಪಿಗಳಿಂದ ಒಟ್ಟು 5.53 ಕೋಟಿ ಮೌಲ್ಯದ 9.7 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡಿದಿದ್ದಾರೆ.

ಕಳೆದ ಮಾರ್ಚ್​ 8 ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಫಲಕ್​​​​ನುಮಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೊಲ್ಕತ್ತಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದು, ಬಂಧಿತನಿಂದ ಒಟ್ಟು 1.32 ಕೋಟಿ ಮೌಲ್ಯದ 2.314 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿರುವುದಾಗಿ ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್​ 9ರಂದು ಇಲ್ಲಿನ ಶ್ರೀಕಾಕುಳಂ ರೈಲು ನಿಲ್ದಾಣದಲ್ಲಿ ಹೌರಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಬಾಂಗ್ಲಾ ದೇಶದಿಂದ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 4.21 ಕೋಟಿ ಮೌಲ್ಯದ 7.396 ಕೆಜಿ ಚಿನ್ನವನ್ನು ಡಿಆರ್​ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಾಂಗ್ಲಾದೇಶದಿಂದ ಬಂದ ಇಬ್ಬರು ಆರೋಪಿಗಳು ಟ್ರಾಲಿ ಬ್ಯಾಗ್‌ನೊಳಗೆ ಚಿನ್ನವನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಒಳ ಉಡುಪಿನಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಣೆ: 4.5 ಕೋಟಿ ಮೌಲ್ಯದ ಚಿನ್ನ ವಶ

ABOUT THE AUTHOR

...view details