ಶಿರಡಿ (ಮಹಾರಾಷ್ಟ್ರ):ಇಲ್ಲಿನ ವಿಶ್ವವಿಖ್ಯಾತ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ. ಕಾಣಿಕೆ ಹುಂಡಿಯಲ್ಲಿ ಭಕ್ತರು ಈವರೆಗೂ ಹಾಕಿರುವ 450 ಕೆಜಿ ಚಿನ್ನದಲ್ಲಿ 155 ಕೆಜಿ ಬಂಗಾರ ಮತ್ತು 6 ಸಾವಿರ ಕೆಜಿ ಬೆಳ್ಳಿ ಕರಗಿಸಿ ಅದರಲ್ಲಿ ಸಾಯಿಬಾಬಾರ ಪದಕಗಳನ್ನು ರೂಪಿಸಲು ಮಂಡಳಿ ಮುಂದಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಶಿರಡಿಯ ಸಾಯಿಬಾಬಾ ದೇವಾಲಯವು ದೇಶ, ವಿದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಿರಡಿಯ ಸಾಯಿಬಾಬಾನ ದರ್ಶನಕ್ಕೆ ದೇಶ-ವಿದೇಶಗಳಿಂದ ಜನ ಬರುತ್ತಾರೆ. ಭಕ್ತರು ಮುಡಿಪಾಗಿ ತಂದ ಕಾಣಿಕೆಗಳನ್ನು ಹುಂಡಿಯಲ್ಲಿ ಅರ್ಪಿಸುತ್ತಾರೆ. ಸಾಯಿ ಸಂಸ್ಥಾನಕ್ಕೆ ಕೋಟಿಗಟ್ಟಲೆ ದೇಣಿಗೆ ಬರುತ್ತದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿ ಕೂಡ ಸೇರಿದೆ. ಸಾಯಿಬಾಬಾ ಸಂಸ್ಥಾನದಿಂದ ಭಕ್ತರಿಗೆ ಸೌಕರ್ಯ ಒದಗಿಸುವುದರೊಂದಿಗೆ ಹೊಸ ಪ್ರಯೋಗವನ್ನೂ ನಡೆಸಲು ಮುಂದಾಗಲಾಗಿದೆ.
ಸಾಯಿಬಾಬಾ ಖಜಾನೆಯಲ್ಲಿ 450 ಕೆಜಿ ಚಿನ್ನ:ಸಾಯಿ ಸಂಸ್ಥಾನದ ಖಜಾನೆಯಲ್ಲಿ ನಗದು, ಚಿನ್ನ ಮತ್ತು ಬೆಳ್ಳಿಯನ್ನು ಹೇರಳವಾಗಿ ಠೇವಣಿ ಮಾಡಲಾಗುತ್ತದೆ. ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನಲ್ಲಿ ಸರಿಸುಮಾರು 450 ಕೆಜಿ ಚಿನ್ನ ಮತ್ತು 6000 ಕೆಜಿ ಬೆಳ್ಳಿ ಲಭ್ಯವಿದೆ. ತುಳಜಾಪುರದ ಸಂಸ್ಥಾನವು ಭಕ್ತರಿಗಾಗಿ ಸಾಯಿಬಾಬಾರ ಚಿತ್ರವಿರುವ ನಾಣ್ಯಗಳು ಮತ್ತು ಪದಕಗಳನ್ನು ಮಾಡಲು ಚಿನ್ನ ಮತ್ತು ಬೆಳ್ಳಿಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತುಳಜಾಪುರ ಸಂಸ್ಥಾನದ ತಂಡವೊಂದು ಶಿರಡಿಯಲ್ಲಿರುವ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳನ್ನು ಭೇಟಿ ಮಾಡಿದೆ.