ಗುಜರಾತ್ : ಇಲ್ಲಿನ ಉದ್ಯಮಿ ಶೀತಲ್ ಭಾಯಿ ಎಂಬವರು ತಮ್ಮ ಮನೆಯಲ್ಲೇ ಸುಮಾರು 6.5 ಅಡಿ ಎತ್ತರದ ಹನುಮಂತನ ಪ್ರತಿಮೆ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಪ್ರತಿಮೆಯು ಸುಮಾರು 350 ಕೆ.ಜಿಗಿಂತಲೂ ಹೆಚ್ಚು ತೂಕ ಹೊಂದಿದೆ. 110 ಕೆ.ಜಿ ಬೆಳ್ಳಿ ಮತ್ತು ಚಿನ್ನದ ಲೇಪನದಿಂದ ತಯಾರಿಸಲಾಗಿದೆ. ಉದ್ಯಮಿಯ ಕುಟುಂಬಸ್ಥರು ಪ್ರತಿನಿತ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದಂತೆ ಮನೆಯಲ್ಲಿ ಬೃಹತ್ ಹನುಮಂತನನ್ನು ಆರಾಧಿಸುತ್ತಿದ್ದಾರೆ.
ಹನುಮಂತನನ್ನು ಶಿವನ ರುದ್ರ ರೂಪ ಎಂದು ಹೇಳಲಾಗುತ್ತದೆ. ಭವ್ಯ ಪ್ರತಿಮೆ ಸ್ಥಾಪನೆಗೂ ಮುನ್ನ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಈ ಉದ್ಯಮಿ ಸಾಕಷ್ಟು ಚರ್ಚಿಸಿದ್ದಾರೆ. ದೇಶ-ವಿದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹಗಳನ್ನು ಅಂತರ್ಜಾಲದ ಮೂಲಕ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ರುದ್ರರೂಪದ ಚಿತ್ರ ಇನ್ಸ್ಟಾಗ್ರಾಂನಲ್ಲಿ ಅವರಿಗೆ ಕಾಣಿಸಿಕೊಂಡಿದೆ. ಆರು ತಿಂಗಳ ಸ್ವಯಂ ಹುಡುಕಾಟದ ನಂತರ ಬೆಳ್ಳಿಯಲ್ಲಿ ವಿಗ್ರಹ ತಯಾರಿಸಲು ನಿರ್ಧರಿಸಿದ್ದರು. ರಾಜಸ್ಥಾನದ ಕಲಾವಿದರು 6 ತಿಂಗಳ ಕಾಲ ಸಮಯ ತೆಗೆದುಕೊಂಡು ಬೆಳ್ಳಿ ಹಾಗೂ 24 ಕ್ಯಾರೆಟ್ ಚಿನ್ನ ಲೇಪನದಿಂದ ಮೂರ್ತಿ ಸಿದ್ಧಪಡಿಸಿದ್ದಾರೆ.
ತಮ್ಮ ಮನೆಯಲ್ಲಿ ಇತರರಿಗೂ ಪೂಜೆ ಸಲ್ಲಿಸಲು ಅವಕಾಶ: ಶೀತಲ್ ಬಾಯಿ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆಗೆ ನಿತ್ಯವೂ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಹನುಮಂತನ ಭಕ್ತರು ಇವರ ಮನೆಗೆ ಬಂದು ದರ್ಶನ ಪಡೆಯಬಹುದು. ಪೂಜೆಯ ಅವಕಾಶವೂ ಇದೆ ಎಂದು ಶೀತಲ್ ಭಾಯಿ ಹೇಳಿದರು.