ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇಂದು ಶಾರದಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಕಲ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುವ ಸಂಭವವಿದೆ.
ಶೃಂಗೇರಿಯಿಂದ ವಿಗ್ರಹ ರವಾನೆ: 76 ವರ್ಷಗಳ ನಂತರ ಕುಪ್ವಾರದ ಟೀಟ್ವಾಲ್ ಪ್ರದೇಶದಲ್ಲಿ ಶಾರದೆಯ ದೇವಾಲಯವನ್ನು ನಿರ್ಮಿಸಲಾಗಿದೆ. ದೇವರ ವಿಗ್ರಹವನ್ನು ಕರ್ನಾಟಕದ ಶೃಂಗೇರಿ ಮಠದಿಂದ ತರಲಾಗಿದೆ. ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಹಿಂದೂ ಧರ್ಮದ ಪ್ರಕಾರ, ಹೊಸ ವರ್ಷದ ಮೊದಲ ದಿನವಾದ ಯುಗಾದಿಯಂದೇ ನಡೆಯುತ್ತಿರುವುದು ವಿಶೇಷ. ಈ ಐತಿಹಾಸಿಕ ಧಾರ್ಮಿಕ ಕಾರ್ಯದಲ್ಲಿ ಭಾಗವಾಗಲು ಅನೇಕ ಮಂದಿ ಭಕ್ತರು ಮತ್ತು ವಿದ್ವಾಂಸರು ಸೇರಿದಂತೆ ಕರ್ನಾಟಕದ ಶೃಂಗೇರಿ ಮಠದ ಸುಮಾರು 100 ಅರ್ಚಕರು ತೆರಳಿದ್ದಾರೆ.
ಸ್ಥಳೀಯ ಮುಸ್ಲಿಮರ ಬೆಂಬಲ: ಪ್ರತ್ಯೇಕ ಭಾರತ ಮತ್ತು ಪಾಕಿಸ್ತಾನ ವಿಭಜನೆಗೂ ಮೊದಲು ಟೀಟ್ವಾಲ್ ಶಾರದಾ ದೇವಿಯ ದೇವಾಲಯ ಐತಿಹಾಸಿಕ ಮಹತ್ವ ಹೊಂದಿತ್ತು. 1947 ರಲ್ಲಿ ಕ್ರಿಶಗಂಗಾ ನದಿಯ ದಡದಲ್ಲಿರುವ ಮೂಲ ದೇವಾಲಯ ಮತ್ತು ಪಕ್ಕದ ಗುರುದ್ವಾರವನ್ನು ಬುಡಕಟ್ಟು ದಾಳಿಕೋರರು ನಾಶಪಡಿಸಿದ್ದರು. ಇದೀಗ ಮತ್ತೆ ಟೀಟ್ವಾಲ್ನಲ್ಲಿ ದೇವಿಯ ವಿಗ್ರಹ ಸ್ಥಾಪಿಸಲಾಗುತ್ತಿದೆ. ಈ ದೇವಾಲಯದ ನಿರ್ಮಾಣಕ್ಕೆ ಸ್ಥಳೀಯ ಮುಸ್ಲಿಮರು ಸಹ ವ್ಯಾಪಕ ಬೆಂಬಲ ನೀಡಿದ್ದಾರೆ. ಐತಿಹಾಸಿಕ ಮರುಸ್ಥಾಪನೆಯ ಕೆಲಸ ನಡೆಯುತ್ತಿದೆ. ದೀರ್ಘಕಾಲದಿಂದ ಈ ಪ್ರದೇಶದಲ್ಲಿ ಘನತೆ ಕಳೆದುಕೊಂಡಿರುವ ದೇವಾಲಯವನ್ನು ಮರಳಿ ಸ್ಥಾಪಿಸುತ್ತಿರುವುದರಿಂದ ಪವಿತ್ರ ಯಾತ್ರಾ ಸ್ಥಳವಾಗಿ ಪುನಃ ಮನ್ನಣೆ ಪಡೆಯುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.