ಪಣಜಿ :ಗೋವಾ ತನ್ನ ಜನಸಂಖ್ಯೆಯ ಶೇ.90 ಜನರಿಗೆ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಿದ ದೇಶದ ಮೊದಲ ರಾಜ್ಯವಾಗಿದೆ ಎಂದು ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಗೋವಾ ಸಿಎಂ ಈ ಮಾಹಿತಿ ನೀಡಿದ್ದಾರೆ.
ಫ್ರಂಟ್ಲೈನ್ ವರ್ಕರ್ಸ್ ಮತ್ತು ಕೋವಿಡ್-19 ವಾರಿಯರ್ಸ್ ಪ್ರಯತ್ನದಿಂದಾಗಿ ರಾಜ್ಯವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದೆ ಎಂದು ಸಾವಂತ್ ಹೇಳಿದ್ರು. ಮುಂದಿನ ತಿಂಗಳಿನಿಂದ ರಾಜ್ಯದ ಜನರು ತಿಂಗಳಿಗೆ 16,000 ಲೀಟರ್ನಷ್ಟು ನಲ್ಲಿ ನೀರನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಸಾವಂತ್ ಘೋಷಿಸಿದ್ರು. ಮೊಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಮೊದಲ ಹಂತವು ಆಗಸ್ಟ್ 15, 2022ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಕಾರ್ಯಾರಂಭ ಮಾಡಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ಇದೇ ವೇಳೆ ಮಹದಾಯಿ ನದಿ ನೀರಿನ ವಿವಾದದ ವಿಷಯದಲ್ಲಿ ತಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ರು. ಮಹದಾಯಿ ವಿಚಾರದಲ್ಲಿ ಯುದ್ಧವನ್ನು ಗೆಲ್ಲುವವರೆಗೂ ನಾವು ನಿಲ್ಲುವುದಿಲ್ಲ ಎಂದ್ರು. ಗೋವಾ ಮತ್ತು ಕರ್ನಾಟಕವನ್ನು ನದಿ ನೀರಿನ ಹಂಚಿಕೆಯ ವಿವಾದದಲ್ಲಿ ಸಿಲುಕಿಸಲಾಗಿದೆ. ಈ ನದಿಯನ್ನು ಗೋವಾದ ಜೀವನಾಡಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ರು.