ಪಣಜಿ:ಮಹದಾಯಿ ಯೋಜನೆಯಲ್ಲಿ ನಾವು ಕಾನೂನಾತ್ಮಕ, ತಾಂತ್ರಿಕ ಮತ್ತು ರಾಜಕೀಯ ಮುನ್ನಲೆಯಲ್ಲಿ ಹೋರಾಡುತ್ತಿದ್ದು, ಇದರಲ್ಲಿ ನಮಗೆ ಜಯ ಸಿಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಾದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ಮೇಲೆ ಕರ್ನಾಟಕವು ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಮಹದಾಯಿ ನೀರನ್ನು ತಿರುಗಿಸುವ ಅಕ್ರಮವಾಗಿ ತಿರುಗಿಸಿದ್ದ ವಿವಾದ ಕರ್ನಾಟಕ ಮತ್ತು ಗೋವಾದ ನಡುವೆ ಇದ್ದು, ಈ ಸಂಬಂಧ ಎರಡು ನ್ಯಾಯಾಂಗ ನಿಂದನೆ ಅರ್ಜಿಗಳು ಸುಪ್ರೀಂಕೋರ್ಟ್ ಮುಂದೆ ಇವೆ.
ಮಹದಾಯಿ ನದಿಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳ ನಿರ್ಮಾಣಕ್ಕೆ ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗ ಇತ್ತೀಚೆಗೆ ಅನುಮೋದನೆ ನೀಡಿತ್ತು. ಇದಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆ ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯದ ಮೂಲಕ ಸಾಗುತ್ತದೆ. ಈ ಹಿನ್ನಲೆ ಕರ್ನಾಟಕವು ಮಹದಾಯಿ ನದಿಯಿಂದ ನೀರನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ಗೋವಾ ಸರ್ಕಾರ ವಾದ ಮಂಡಿಸಿದೆ.
ನಮ್ಮ ಹೋರಾಟ ನಿಲ್ಲದು- ಸಾವಂತ್:ಯಾರು ಏನೇ ಹೇಳಿದರೂ ನಾವು ನಿರ್ಧರಿಸಿ ಆಗಿದೆ. ಮಹದಾಯಿಗಾಗಿ ನಾವು ಏನು ಮಾಡುತ್ತಿದ್ದೆವೋ ಅದನ್ನು ಕಾನೂನು ಬದ್ದವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯದ ಮೂಲಕ ಮಾಡುತ್ತಿದ್ದೇವೆ. ಈ ಹೋರಾಟ ಗೆಲ್ಲಲು ಏನು ಬೇಕೋ ಅದನ್ನು ಮುಂದುವರಿಸಿದ್ದೇವೆ ಎಂದು ಸಾವಂತ್ ಮತ್ತೊಮ್ಮೆ ಪುನರ್ ಉಚ್ಚರಿಸಿದ್ದಾರೆ.
ಸುಪ್ರೀಂಕೊರ್ಟ್ ಆದೇಶದಂತೆ ನಮ್ಮ ಸರ್ಕಾರದ ನಿರ್ಧಾರ:ಕಳೆದೆರಡು ದಿನಗಳ ಹಿಂದೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಳಸಾ - ಬಂಡೂರಿನ ವಿಷಯದಲ್ಲಿ ಗೋವಾ ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೆ ಯಾವುದೇ ಮಾನ್ಯತೆ ಇಲ್ಲ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಹದಾಯಿ ನ್ಯಾಯಾಧೀಕರಣ ರಚನೆ ಆಗಿದೆ. ಈ ನ್ಯಾಯಾಧೀಕರಣ 10 ವರ್ಷ ವಿಚಾರಣೆ ನಡೆಸಿ, ತೀರ್ಪು ನೀಡಿದ್ದು, ಈ ತೀರ್ಪು ಸರ್ವೋಚ್ಛ ನ್ಯಾಯಾಲಯದ ನ್ಯಾಯಕ್ಕೆ ಸಮ. ಈ ಆದೇಶದ ಮೇಲೆ ನಾವು ವಿಸ್ತೃತ ಯೋಜನಾ ವರದಿ ತಯಾರಿಸಿದ್ದು, ಅದರ ಆಧಾರದ ಮೇಲೆ ನಾನು ಕಾನೂನು ಬದ್ಧವಾಗಿ ಕೆಲಸ ಮಾಡುತ್ತೇವೆ ಎಂದಿದ್ದರು. ಬೊಮ್ಮಾಯಿ ಅವರ ಈ ಹೇಳಿಕೆ ವಿರುದ್ಧ ಇದೀಗ ಗೋವಾ ಸಿಎಂ ಪ್ರತಿಕ್ರಿಯಿಸಿದ್ದಾರೆ.