ನವದೆಹಲಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇಂದು ನವದೆಹಲಿಯಲ್ಲಿ ಪ್ರಧಾನಿ ಅವರನ್ನ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಗೋವಾದಲ್ಲಿ ಗರಿಷ್ಠ ಸ್ಥಾನಗಳೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಭೇಟಿ ಮಾಡಿದ ಗೋವಾ ಸಿಎಂ.. ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಇಂಗಿತ ಹೊರಹಾಕಿದ ಸಾವಂತ್! - ಗೋವಾದಲ್ಲಿ ಬಿಜೆಪಿ ಪಕ್ಷ
ಗೋವಾ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ, ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದೇನೆ. ಗರಿಷ್ಠ ಸ್ಥಾನಗಳೊಂದಿಗೆ ಸರ್ಕಾರ ರಚನೆ ಮಾಡಲಿದ್ದೇವೆ. ಗೋವಾ ಸಿಎಂ ಆಗಿ ಸೇವೆ ಸಲ್ಲಿಸುವ ಅವಕಾಶವನ್ನ ಪಕ್ಷ ಮತ್ತೊಮ್ಮೆ ನನಗೆ ನೀಡುತ್ತದೆ ಎಂದು ಭಾವಿಸುತ್ತೇನೆ. ಖಂಡಿತವಾಗಿ ಅದು ನಡೆಯುತ್ತದೆ ಎಂದಿದ್ದಾರೆ. 40 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಲಿದ್ದು, ಚುನಾವಣೋತ್ತರ ಸಮೀಕ್ಷೆಯಲ್ಲೂ ಇದೇ ಫಲಿತಾಂಶ ಹೊರಬಿದ್ದಿದೆ. ಪಕ್ಷೇತರ ಹಾಗೂ ಇತರ ಸ್ಥಳೀಯ ಪಕ್ಷಗಳೊಂದಿಗೆ ಸೇರಿ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದಿದ್ದಾರೆ.
ಗೋವಾದಲ್ಲಿ ಕಾಂಗ್ರೆಸ್ ಗೆಲುವು ಎಂದ ಡಿಕೆಶಿ: ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ನಮಗೆ ಹೆಚ್ಚಿನ ಸ್ಥಾನ ಸಿಗಲಿದ್ದು, ಬಹುಮತದೊಂದಿಗೆ ಗೋವಾದಲ್ಲಿ ಅಧಿಕಾರ ರಚನೆ ಮಾಡಲಿದ್ದೇವೆ. ಅಲ್ಲಿನ ಮುಖಂಡರಿಗೆ ಸಹಾಯ ಮಾಡಲು ಗೋವಾಗೆ ತೆರಳಲಿದ್ದೇನೆ ಎಂದಿದ್ದಾರೆ.