ಪಣಜಿ (ಗೋವಾ): ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು 2010 ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ರಚಿಸಲಾಗಿತ್ತು ಎಂದು ಹೇಳಿರುವ ಗೋವಾ ಕಾಂಗ್ರೆಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುಳ್ಳುಗಾರ ಎಂದು ಆರೋಪಿಸಿದೆ. "ಸುಳ್ಳುಗಾರ ಪ್ರಮೋದ್ ಸಾವಂತ್ ಅವರು ಗೋವಾದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ರಚಿಸಲಾಯಿತು ಎಂದು ಈಗ ಪ್ರತಿಪಾದಿಸಿದ್ದಾರೆ. ವಾಸ್ತವ ಎಂದರೆ 2010 ರ ನವೆಂಬರ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದನ್ನು ರಚಿಸಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಶ್ರೀನಿವಾಸ್ ಖಲಪ್ ಹೇಳಿದರು.
ಮಹದಾಯಿ ಜಲವಿವಾದ ನ್ಯಾಯಮಂಡಳಿ ರಚನೆ ಸೇರಿದಂತೆ ಎಲ್ಲಾ ಪ್ರಮುಖ ನೀತಿ ನಿರ್ಧಾರಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಭಾನುವಾರ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. 2012ರಲ್ಲಿ ಗೋವಾದಲ್ಲಿ ಮತ್ತು 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರವೇ ನಮ್ಮ ಜೀವಸೆಲೆಯಾದ ಮಹದಾಯಿ ನದಿಯನ್ನು ನಾಶ ಮಾಡಲಾಗಿದೆ. ಕಳಸಾ ಬಂಡೂರಿಯ ವಿವರವಾದ ಯೋಜನಾ ವರದಿಗೆ ನೀಡಿದ ಅನುಮೋದನೆಯ ಬಗ್ಗೆ ಅವರು ಏಕೆ ಕ್ರೆಡಿಟ್ ಪಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
"ಕಾಂಗ್ರೆಸ್ ಪಕ್ಷವು ಮಹದಾಯಿಗಾಗಿ ಯಾವಾಗಲೂ ಹೋರಾಡುತ್ತಿದೆ. ನಾವು ಕೇಂದ್ರ, ಕರ್ನಾಟಕ ಮತ್ತು ಗೋವಾದ ಬಿಜೆಪಿ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ಗೋವಾದ ಎಲ್ಲ ತಾಲೂಕುಗಳಲ್ಲಿ ಹಾಗೂ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ರಾಜಭವನ, ಐಎಫ್‌ಎಫ್‌ಐ ಉದ್ಘಾಟನಾ ಸಮಾರಂಭ ಮತ್ತು ವಿವಿಧೆಡೆ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಜೀವನಾಡಿ ತಾಯಿ ಮಹದಾಯಿಯನ್ನು ಉಳಿಸಲು ಪ್ರಯತ್ನ ಮಾಡಿದ್ದೇವೆ ಎಂದು ಖಲಪ್ ಹೇಳಿದರು.