ಪಣಜಿ(ಗೋವಾ) :ಸೋಮವಾರ ಸಂಜೆ ಪಣಜಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯ ಹೆಸರು ಮತ್ತು ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ಪಕ್ಷ ಪ್ರಕಟಿಸಲಿದೆ.
ರಾಜ್ಯದಲ್ಲಿ ಸರ್ಕಾರ ರಚನೆಗೆ ಅನುಕೂಲವಾಗುವಂತೆ ಬಿಜೆಪಿಯ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್.ಮುರುಗನ್ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಸಂಜೆ 4 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತನವಾಡೆ ಭಾನುವಾರ ಖಚಿತ ಪಡಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ಮುಂಚೂಣಿ ಅಭ್ಯರ್ಥಿಯಾಗಿರುವ ಹಂಗಾಮಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಪಕ್ಷ ಯಾವ ಜವಾಬ್ದಾರಿಯನ್ನು ನೀಡಿದರೂ ಅದನ್ನು ಸ್ವೀಕರಿಸಲು ಸಿದ್ಧನಾಗಿದ್ದೇನೆ.
ಗೋವಾದಲ್ಲಿ ಪಕ್ಷಕ್ಕೆ 20 ಸ್ಥಾನಗಳನ್ನು ತಂದುಕೊಡುವಲ್ಲಿ ಯಶಸ್ವಿಯಾಗಿರುವ ಬಗ್ಗೆ ನನಗೆ ಸಂತೋಷವಿದೆ. ನಾಳೆ ಪಕ್ಷದ ಶಾಸಕಾಂಗ ಸಭೆಗೆ ಬಿಜೆಪಿ ವೀಕ್ಷಕರು ಬರುತ್ತಿದ್ದಾರೆ. ನಾಳೆಯ ಸಭೆಯಲ್ಲಿ ಎಲ್ಲವನ್ನೂ ನಿರ್ಧರಿಸಲಾಗುವುದು. ಪಕ್ಷ ನೀಡಿದ ಜವಾಬ್ದಾರಿಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಭಾನುವಾರ ಹೇಳಿದರು.
ಸರ್ಕಾರ ರಚಿಸಲು ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಬಿಜೆಪಿ ಸಂಪರ್ಕಿಸಲಿದೆ. ಇದಕ್ಕೂ ಮುನ್ನ ಶನಿವಾರ ಪ್ರಮೋದ್ ಸಾವಂತ್ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆ ಕುರಿತು ಚರ್ಚಿಸಿದರು.
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೋವಾದಲ್ಲಿ 40 ಸದಸ್ಯ ಬಲದಲ್ಲಿ 20 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಗೋವಾದಲ್ಲಿ ಬಿಜೆಪಿ ಬಹುಮತಕ್ಕಿಂತ ಒಂದು ಸ್ಥಾನ ಕಡಿಮೆ ಗಳಿಸಿದೆ. ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮಹಾರಾಷ್ಟ್ರವಾದಿ ಗೋಮಾಂತಕ್ (MGP) ಮತ್ತು ಸ್ವತಂತ್ರ ಅಭ್ಯರ್ಥಿಗಳ ಸಹಾಯ ಪಡೆಯಲು ತಯಾರಿ ನಡೆಸಿದೆ.