ಕೋಲ್ಕತ್ತಾ(ಪಶ್ಚಿಮ ಬಂಗಾಳ):ಮುಂದಿನ ವರ್ಷದ ಆರಂಭದಲ್ಲೇ ಪಂಜಾಬ್, ಉತ್ತರ ಪ್ರದೇಶ ಜೊತೆಗೆ ಸಣ್ಣ ರಾಜ್ಯವಾಗಿರುವ ಗೋವಾದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿರುವ ತೃಣಮೂಲ ಕಾಂಗ್ರೆಸ್ ಇದೀಗ ಮಹಿಳೆಯರಿಗೋಸ್ಕರ ಭರ್ಜರಿ ಘೋಷಣೆ ಮಾಡಿದೆ.
ಮುಂದಿನ ವರ್ಷದ ಫೆಬ್ರುವರಿಯಲ್ಲಿ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಅಕೌಂಟ್ಗೆ ನೇರವಾಗಿ ಪ್ರತಿ ತಿಂಗಳು 5 ಸಾವಿರ ರೂ. ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದೆ. ಗೃಹ ಲಕ್ಷ್ಮಿ ಎಂಬ ಯೋಜನೆ ಮೂಲಕ ಈ ಹಣ ವರ್ಗಾವಣೆ ಮಾಡಲಾಗುವುದು ಎಂದು ಗೋವಾ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ತಿಳಿಸಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ವರ್ಷಕ್ಕೆ 60 ಸಾವಿರ ರೂ. ನೀಡಲಾಗುವುದು ಎಂದಿದ್ದಾರೆ.
ಗೋವಾದಲ್ಲಿ 3.5 ಲಕ್ಷ ಮಹಿಳೆಯರಿದ್ದು, ಅವರಿಗೆ ಈ ಯೋಜನೆ ಲಾಭ ಸಿಗಲಿದೆ ಎಂದು ತಿಳಿಸಿದ್ದು, ಇದಕ್ಕಾಗಿ 1500 - 2000 ಕೋಟಿ ರೂ. ವ್ಯಯವಾಗಲಿದೆ ಎಂಬ ಮಾಹಿತಿ ಸಹ ಹಂಚಿಕೊಂಡಿದ್ದಾರೆ. ಗೋವಾದಲ್ಲಿ 40 ಕ್ಷೇತ್ರಗಳಲ್ಲೂ ಟಿಎಂಸಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ. ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಮಹಿಳೆಯರಿಗೆ ಪ್ರತಿ ತಿಂಗಳಿಗೆ 1,500 ರೂ ನೀಡುತ್ತಿದೆ.
ಇದನ್ನೂ ಓದಿರಿ:CDS ರಾವತ್ ಸಾವಿನ ಸಂಭ್ರಮಾಚರಣೆಗೆ ಖಂಡನೆ: ’’ಇನ್ಮುಂದೆ ಮುಸ್ಲಿಂ ಅಲ್ಲ ಭಾರತೀಯ‘‘ಎಂದ ನಿರ್ಮಾಪಕ ಅಲಿ ಅಕ್ಬರ್!
ಕಳೆದ ಕೆಲ ದಿನಗಳ ಹಿಂದೆ ಗೋವಾ ಪ್ರವಾಸ ಕೈಗೊಂಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಹಿಳೆಯರಿಗ ಪ್ರತಿ ತಿಂಗಳು 1 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಇಲ್ಲಿಗೆ ಭೇಟಿ ನೀಡಿರುವ ಪ್ರಿಯಾಂಕಾ ಗಾಂಧಿ, ತಮ್ಮ ಸರ್ಕಾರ ಅಧಿಕಾರಕ್ಕ ಬಂದರೆ ಇಲ್ಲಿನ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ.