ಅಮೃತಸರ (ಪಂಜಾಬ್): ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ವಾಡಿಯಾ ಸಮೂಹದ ಗೋ ಫಸ್ಟ್ ಏರ್‌ಲೈನ್ಸ್ ತನ್ನ ವಿಮಾನಗಳ ಸೇವೆಯನ್ನು ದಿಢೀರ್ ನಿನ್ನೆ(ಮಂಗಳವಾರ) ಸ್ಥಗಿತಗೊಳಿಸಿದ್ದು ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಏರ್‌ಲೈನ್ಸ್ ತನ್ನ ವಿಮಾನಗಳ ಹಾರಾಟವನ್ನು ಮೇ 3 ರಿಂದ ಮೇ 5 ರವರೆಗೆ ರದ್ದುಗೊಳಿಸುತ್ತಿದೆ ಎಂದು ಘೋಷಿಸಿ, ಪ್ರಯಾಣಿಕರಿಗೆ ಸಂಪೂರ್ಣ ಟಿಕೆಟ್ ಮರುಪಾವತಿ ಮಾಡಲಾಗುವುದು ಎಂದು ಹೇಳಿದೆ. ಇನ್ನೊಂದೆಡೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಕಂಪನಿಗೆ ನೋಟಿಸ್ ಜಾರಿಗೊಳಿಸಿದೆ.
ಏತನ್ಮಧ್ಯೆ, ಗೋ ಫಸ್ಟ್ ಏರ್‌ಲೈನ್ಸ್‌ನ ಕೌಂಟರ್ ಬಂದಾಗಿದ್ದು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣ ನಿರ್ಜನವಾಗಿ ಕಂಡುಬಂತು. ಪ್ರಯಾಣಿಕ ಗುರ್ವಿಂದರ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, "ನಾನು ಮುಂಬೈಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದೆ. ಆದರೆ ವಿಮಾನ ನಿಲ್ದಾಣ ತಲುಪಿದಾಗ ಕೌಂಟರ್‌ನಲ್ಲಿ ಯಾರೂ ಇರಲಿಲ್ಲ. ನಮ್ಮನ್ನು ಇತರೆ ವಿಮಾನಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಬೇಕೆಂದು ಕೇಳಿದೆ. ಆದರೆ ಗೋ ಫಸ್ಟ್ ಏರ್‌ಲೈನ್ ನಮಗೆ ಮರುಪಾವತಿ ನೀಡುವ ಬಗ್ಗೆ ಮಾತ್ರ ಮಾತನಾಡುತ್ತಿದೆ" ಎಂದು ಹೇಳಿದರು.
"ಗೋ ಫಸ್ಟ್ ಏರ್‌ಲೈನ್ಸ್ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ವಿಮಾನ ಸೇವೆ ನೀಡದೆ ಇದ್ದಕ್ಕಿದ್ದಂತೆ ರದ್ದುಗೊಳಿಸಿದೆ. ಇನ್ನೊಂದು ವಿಮಾನ ಸೇವೆ ಕಲ್ಪಿಸಬೇಕಿತ್ತು. ನಮಗೆ ಏಳು ದಿನಗಳ ನಂತರ ಹಣ ಮರುಪಾವತಿಸುವುದಾಗಿ ಹೇಳಿದ್ದಾರೆ" ಎನ್ನುತ್ತಾರೆ ಮತ್ತೊಬ್ಬ ಪ್ರಯಾಣಿಕ.