ಬಸ್ತಾರ್, ಛತ್ತೀಸ್ಗಢ:ಈ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಗಳಿಗೂ ಗ್ಲೂಕೋಸ್ ಬೇಕಂತೆ ಕಾಣಿಸುತ್ತದೆ. ಬಸ್ತಾರ್ ಮೆಡಿಕಲ್ ಕಾಲೇಜಿನಲ್ಲಿ ರೋಗಿಗಳಿಗೆ ನೀಡುವ ಗ್ಲೂಕೋಸ್ಗಳನ್ನು ಇಲಿಗಳು ಕುಡಿದು ಬಲಿಷ್ಠವಾಗುತ್ತಿವೆ. ಮೆಡಿಕಲ್ ಕಾಲೇಜಿನ ನಿರ್ಲಕ್ಷತನ ಎಷ್ಟರಮಟ್ಟಿಗೆ ಇದೆ ಎಂಬುದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಗ್ಲೂಕೋಸ್ ಕುಡಿದು ಬಲಿಷ್ಠವಾಗುತ್ತಿರುವ ಇಲಿಗಳು ಏನಿದು ಪ್ರಕರಣ: ಬಸ್ತಾರ್ ವಿಭಾಗದ ಏಕೈಕ ವೈದ್ಯಕೀಯ ಕಾಲೇಜು ಎಂದರೆ ಅದು ಬಲಿರಾಮ್ ಕಶ್ಯಪ್ ವೈದ್ಯಕೀಯ ಕಾಲೇಜು. ಸಿಬ್ಬಂದಿಯರ ನಿರ್ಲಕ್ಷ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರೋಗಿಯನ್ನು ಹಾಸಿಗೆಯ ಮೇಲೆ ಮಲಗಿಸಿ ಗ್ಲೂಕೋಸ್ ನೀಡಲಾಗುತ್ತಿದೆ.
ಆಗ ಇಲಿಯೊಂದು ಗ್ಲೂಕೋಸ್ ಬಾಟಲಿಯ ಸ್ಟ್ಯಾಂಡ್‌ನಿಂದ ಕೆಳಗೆ ಬಂದು ರೋಗಿಯ ರಕ್ತನಾಳದಲ್ಲಿ ಪೈಪ್ ಅನ್ನು ಕಡಿಯುತ್ತದೆ. ಅಷ್ಟರಲ್ಲಿ ಇನ್ನೊಂದು ಇಲಿ ಕೆಳಗಿಳಿದು ಆ ಪೈಪಿನಿಂದ ಹರಿಯುವ ಗ್ಲೂಕೋಸ್ ಅನ್ನು ಕುಡಿಯಲಾರಂಭಿಸುತ್ತದೆ. ಇಡೀ ಘಟನೆಯನ್ನು ಪಕ್ಕದ ಬೆಡ್‌ನಲ್ಲಿ ದಾಖಲಾದ ಇತರ ರೋಗಿಯ ಸಂಬಂಧಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಕೆಟ್ಟ ಸ್ಥಿತಿಯಲ್ಲಿದೆ ಸರ್ಕಾರಿ ಆಸ್ಪತ್ರೆ:ಬಸ್ತಾರ್ ವಿಭಾಗವು ಆರೋಗ್ಯ ಸೇವೆಗಳ ಹೆಸರಿನಲ್ಲಿ ಯಾವಾಗಲೂ ಹಿಂದುಳಿದಿದೆ. ಅದಕ್ಕಾಗಿಯೇ ಬಸ್ತಾರ್ ವಿಭಾಗದ ಕೇಂದ್ರ ಕಚೇರಿ ಜಗದಲ್‌ಪುರದಲ್ಲಿ 700 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸ್ಥಾಪಿಸಲಾದ ಈ ವೈದ್ಯಕೀಯ ಕಾಲೇಜು ಈಗ ಕೆಟ್ಟ ಸ್ಥಿತಿಯಲ್ಲಿದೆ. ಈ ವೈದ್ಯಕೀಯ ಕಾಲೇಜು ಕಮ್ ಆಸ್ಪತ್ರೆಯ ಉದ್ಘಾಟನೆಯನ್ನು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಾಡಿದರು.
ಇದು ಆರೋಗ್ಯ ಸೌಲಭ್ಯಗಳ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದು ಬಣ್ಣಿಸಲಾಗಿತ್ತು. ಬಸ್ತಾರ್ ಜಿಲ್ಲೆಯನ್ನು ಹೊರತುಪಡಿಸಿ ಇತರ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಈ ವೈದ್ಯಕೀಯ ಕಾಲೇಜಿಗೆ ಬರುತ್ತಾರೆ. ಇದರಲ್ಲಿ ಬುಡಕಟ್ಟು ರೋಗಿಗಳ ಸಂಖ್ಯೆ ಅತಿ ಹೆಚ್ಚು. ಆದರೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸ್ಥಿತಿಯೇ ಚಿಂತಾಜನಕವಾಗಿದೆ.
ಅಧಿಕಾರಿಗಳು ಮೌನ:ಈವಿಷಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಸಂಬಂಧಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರವೇ ನಾವು ಏನನ್ನಾದರೂ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಯು.ಎಸ್.ಪಂಕರ ಹೇಳಿದರು. ಮತ್ತೊಂದೆಡೆ ಆಸ್ಪತ್ರೆಯ ಅಧೀಕ್ಷಕ ಡಾ.ಟಿಂಕು ಸಿನ್ಹಾ ಮಾತನಾಡಿ, ಆಸ್ಪತ್ರೆಯಲ್ಲಿ ಇಲಿಗಳ ಸಮಸ್ಯೆ ಗಣನೀಯವಾಗಿ ಹೆಚ್ಚಿದೆ. ಈ ಕಾರಣಕ್ಕಾಗಿಯೇ ಇಲಿಗಳನ್ನು ಸ್ವಚ್ಛಗೊಳಿಸಲು ಖಾಸಗಿ ಕಂಪನಿಗೆ ಟೆಂಡರ್ ಕೂಡ ನೀಡಲಾಗಿದೆ. ಈವರೆಗೆ 1200 ಇಲಿಗಳನ್ನು ಕೊಂದು ಹಾಕಲಾಗಿದೆ. ಕೆಲವು ಸಮಸ್ಯೆಗಳು ಎದುರಾಗಿವೆ. ಆದರೆ ಶೀಘ್ರದಲ್ಲಿಯೇ ಹೆಚ್ಚಿನ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭವಾಗಲಿದ್ದು, ಎಲ್ಲ ವ್ಯವಸ್ಥೆ ಸರಿಪಡಿಸಲಾಗುವುದು ಎಂದರು.
ಈ ಹಿಂದೆ ಸಹ ನಡೆದಿದೆ: ವೈದ್ಯಕೀಯ ಕಾಲೇಜಿನಲ್ಲಿ ನಿರ್ಲಕ್ಷ್ಯದ ಚಿತ್ರಣ ಇದೇ ಮೊದಲೇನೂ ಅಲ್ಲ. ಇದಕ್ಕೂ ಮುನ್ನ ಹಲವು ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಹಲವು ನಿರ್ಲಕ್ಷ್ಯವನ್ನು ಬಯಲಿಗೆಳೆದಿದ್ದರು. ನಿರ್ಲಕ್ಷ್ಯದ ದೂರಿನ ಬಗ್ಗೆ ಕುಟುಂಬ ಸದಸ್ಯರು ಮತ್ತು ವೈದ್ಯ ಸಿಬ್ಬಂದಿ ನಡುವೆ ಹಲವು ಬಾರಿ ವಾಗ್ವಾದವೂ ನಡೆದಿದೆ. ಎಫ್‌ಐಆರ್ ದಾಖಲಿಸುವವರೆಗೂ ಈ ವಿಷಯ ಹೋಗಿದೆ. ಬಸ್ತಾರ್‌ನ ಸಾರ್ವಜನಿಕ ಪ್ರತಿನಿಧಿಗಳಲ್ಲಿ ವೈದ್ಯಕೀಯ ಕಾಲೇಜಿನಲ್ಲಿನ ಅವ್ಯವಸ್ಥೆಯ ಬಗ್ಗೆ ಯಾವುದೇ ಜಾಗೃತಿ ಇಲ್ಲ. ಇದರಿಂದಾಗಿ ನಗರದ ನಿವಾಸಿಗಳು ಅವ್ಯವಸ್ಥೆ ಬಗ್ಗೆ ಆಗಾಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ.
ಓದಿ:ICUನಲ್ಲಿ ಚಿಕಿತ್ಸೆ ಪಡೀತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆ ಕಣ್ಣಿನ ರೆಪ್ಪೆ ಕಚ್ಚಿ, ಕೂದಲು ತಿಂದ ಮೂಷಿಕ!