ನವದೆಹಲಿ:ಪ್ರಧಾನಿ ಮೋದಿ ಅವರ ತವರು ಕ್ಷೇತ್ರವಾದ ಗುಜರಾತ್ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಕಂಡಿದೆ. ಮೋದಿ ಅವರ ಈ ಗೆಲುವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು, ಅನೇಕ ಜಾಗತಿಕ ಸುದ್ದಿ ಸಂಸ್ಥೆಗಳು ಈ ಕುರಿತು ವರದಿ ಮಾಡಿದೆ. ಸತತ ಏಳನೇ ಬಾರಿಗೆ ಭಾರತೀಯ ಜನತಾ ಪಾರ್ಟಿ ಗುಜರಾತ್ನಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ. 1980ರಲ್ಲಿ ಆರಂಭವಾದ ಪಕ್ಷ ಈ ಮೊತ್ತದ ಗೆಲುವನ್ನು ಹಿಂದೆಂದೂ ಕಂಡಿರಲಿಲ್ಲ. ತನ್ನದೇ ದಾಖಲೆ ಮುರಿದಿರುವ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಸಿಂಗಾಪೂರದ ದಿ ಸ್ಟ್ರೈಟ್ ಟೈಮ್ಸ್, ನಿಕ್ಕಿ ಏಷಿಯಾ, ಆಲ್ ಜಾಜಿಯಾ, ಇಂಡಿಪೆಂಡೆಂಟ್, ಎಬಿಸಿ ಸೇರಿದಂತೆ ಪ್ರಮುಖ ಜಾಗತಿಕ ಪತ್ರಿಕೆಗಳು ಗುಜರಾತ್ನಲ್ಲಿನ ಭರ್ಜರಿ ಜಯದ ಕುರಿತು ಸುದ್ದಿ ಪ್ರಕಟಿಸಿದೆ.
2024ರ ಲೋಕಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿ ಜನಪ್ರಿಯತೆಯನ್ನು ಮುಂದುವರೆಸಿದ್ದು, ಪ್ರಧಾನಿ ಮೋದಿ ಅವರು ಭಾರತೀಯ ಜನತಾ ಪಕ್ಷಕ್ಕೆ ಗಣನೀಯವಾಗಿ ಬಲ ತುಂಬಿದ್ದಾರೆ ಎಂದು ಬ್ರಿಟಿಷ್ ಪಬ್ಲಿಕೇಷನ್ ಆದ ಗಾರ್ಡಿಯನ್ ವರದಿ ಮಾಡಿದೆ.
1995ರಿಂದ ಗುಜರಾತ್ನಲ್ಲಿ ಬಿಜೆಪಿ ಪಕ್ಷ ಸೋಲೆಂಬುದನ್ನೇ ಕಂಡಿಲ್ಲ ಎಂದು ಜಪಾನ್ ನಿಕ್ಕಿ ಏಷ್ಯಾ ವರದಿ ಮಾಡಿದ್ದು, ಮೋದಿ ಜನಪ್ರಿಯತೆಯನ್ನು ಉಲ್ಲೇಖಿಸಿದೆ. ರಾಜ್ಯದಲ್ಲಿ ಮೋದಿ ಜನಪ್ರಿಯತೆ ಹೊಂದಿದ್ದು, 13 ವರ್ಷಗಳ ಕಾಲ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿ 2014ರಲ್ಲಿ ಪ್ರಧಾನಿಯಾದರು ಎಂದು ವರದಿಯಲ್ಲಿ ತಿಳಿಸಲಾಗಿದೆ.