ಧನ್ಬಾದ್ (ಜಾರ್ಖಂಡ್):ಜಿಲ್ಲೆಯಲ್ಲಿ ಗುರುವಾರ ಲಘು ವಿಮಾನ ಅಪಘಾತ ಸಂಭವಿಸಿದೆ. ಹಾರಾಟದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ದಿಢೀರ್ ಮನೆಯೊಂದಕ್ಕೆ ಅಪ್ಪಳಿಸಿದೆ. ಪೈಲಟ್ ಹಾಗು 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯಂತೆ, ಗುರುವಾರ ಮಧ್ಯಾಹ್ನ ನಗರದ ಬರ್ವಾಡ ಏರೋಡ್ರೋಮ್‌ನಿಂದ ವಿಮಾನ ಟೇಕಾಫ್ ಆಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಬಿರ್ಸಾ ಮುಂಡಾ ಪಾರ್ಕ್‌ನಲ್ಲಿ ಪತನಗೊಂಡಿದೆ. ಗ್ಲೈಡರ್ ಪತನದ ಬಗ್ಗೆ ಮಾಹಿತಿ ಬಂದ ನಂತರ ಸ್ಥಳೀಯ ಆಡಳಿತ ಕೂಡ ಎಚ್ಚೆತ್ತುಕೊಂಡಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ಒದಗಿಸಿದ್ದಾರೆ.
ಕಲ್ಲಿದ್ದಲು ಕ್ಷೇತ್ರಗಳ ಮೇಲೆ ವೈಮಾನಿಕ ಪ್ರವಾಸ ನಡೆಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿತ್ತು. ಇದರಡಿಯಲ್ಲಿ ಗ್ಲೈಡರ್ ಅನ್ನು ಹಾರಾಟಕ್ಕೆ ಬಳಸಲಾಗುತ್ತಿದೆ. ತಾಂತ್ರಿಕ ದೋಷದೊಂದಿಗೇ ಗ್ಲೈಡರ್ ಟೇಕಾಫ್ ಆಗಿತ್ತು. ಹೀಗಾಗಿ ಪೈಲಟ್ ನಿಯಂತ್ರಣಕ್ಕೆ ಸಿಗದೆ ಧನ್‌ಬಾದ್‌ನ ಬಿರ್ಸಾ ಮುಂಡಾ ಪಾರ್ಕ್ ಸಮೀಪದ ಮನೆಯೊಂದಕ್ಕೆ ಅಪ್ಪಳಿಸಿದೆ.
ವಿಮಾನ ಜಖಂಗೊಂಡಿದೆ. ಪೈಲಟ್ ಹಾಗು ಬಾಲಕ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಇದೆ. ಸ್ಥಳೀಯರು ಘಟನಾ ಸ್ಥಳ ತಲುಪಿದ ಕೂಡಲೇ ಗ್ಲೈಡರ್ನಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಗ್ಲೈಡರ್ ಪ್ರವಾಸವನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದೆ. ಆ ಬಳಿಕ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು.