ಶ್ರೀನಗರ: ಇಡೀ ಜಗತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಇತ್ತ ಕಾಶ್ಮೀರಿ ಪುರುಷರನ್ನು ಮದುವೆಯಾದ ಪಾಕಿಸ್ತಾನ ಮೂಲದ ಮಹಿಳೆಯರು ಸೋಮವಾರ ತಮ್ಮ ಬೇಡಿಕೆಗಳಿಗೆ ಕಿವಿಗೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಭಾರತೀಯ ಪೌರತ್ವವನ್ನು ನೀಡುವವರೆಗೆ ಅಥವಾ ಪಾಕಿಸ್ತಾನದಲ್ಲಿರುವ ತಮ್ಮ ಮನೆಗಳಿಗೆ ಹೋಗಲು ಅನುಮತಿ ನೀಡುವವರೆಗೂ ಮಹಿಳಾ ದಿನವು ನಮಗೆ ಅರ್ಥಹೀನವಾಗಿದೆ ಎಂದು ಹೇಳಿದರು.
ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಶ್ಮೀರಿ ಮಾಜಿ ಉಗ್ರರ ಪತ್ನಿಯರು, "ಸರ್ಕಾರದ ಪುನರ್ವಸತಿ ನೀತಿಯಡಿ ಕಾಶ್ಮೀರಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದೇವೆ. ಸರ್ಕಾರದ ಆಶ್ವಾಸನೆಗಳ ಮೇರೆಗೆ ನಾವು ಕಾಶ್ಮೀರಕ್ಕೆ ಬಂದಿದ್ದರೂ ನಮಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ನಮಗೆ ಇಲ್ಲಿ ಪೌರತ್ವ ನಿರಾಕರಿಸಲಾಗುತ್ತಿದೆ. ಪಾಕಿಸ್ತಾನದಲ್ಲಿರುವ ನಮ್ಮ ಮನೆಗಳಿಗೆ ಹೋಗಲು ನಮ್ಮಲ್ಲಿ ದಾಖಲೆಗಳಿಲ್ಲ. ಆದ್ದರಿಂದ ಸರ್ಕಾರ ನಮ್ಮ ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡಬೇಕು" ಎಂದು ಮನವಿ ಮಾಡಿಕೊಂಡರು.