ಶಹಜಹಾನ್‌ಪುರ (ಉತ್ತರಪ್ರದೇಶ): ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿ ಶಿಕ್ಷಕನು ಕನಿಷ್ಠ 18 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿದುಬಂದಿದೆ. ಘಟನೆಯ ನಂತರ ವಿದ್ಯಾರ್ಥಿನಿಯರು ಶಾಲೆಗೆ ಬರುವುದನ್ನು ನಿಲ್ಲಿಸಿದ್ದು, ಈ ಹಿನ್ನೆಲೆ ಸರ್ಕಾರಿ ಶಾಲೆಯ ಹಾಜರಾತಿ ಕನಿಷ್ಠ ಶೇ.35ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶಹಜಹಾನ್ ಪುರದ ದಾದ್ರಾಲ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷಕನ ಈ ಕುಕೃತ್ಯಕ್ಕೆ ಬೆಂಬಲ ನೀಡಿದ ಮುಖ್ಯೋಪಾಧ್ಯಾಯನನ್ನು ಮತ್ತು ಸಹಾಯಕ ಶಿಕ್ಷಕನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ಆರೋಪಿಗಳನ್ನು ಕಂಪ್ಯೂಟರ್ ಶಿಕ್ಷಕ ಮೊಹಮ್ಮದ್ ಅಲಿ, ಸಹಾಯಕ ಶಿಕ್ಷಕ ಸೈಜಾ, ಮುಖ್ಯೋಪಾಧ್ಯಾಯರಾದ ಅನಿಲ್ ಪಾಠಕ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಶಾಲೆಯ ಶೌಚಾಲಯದಲ್ಲಿ ಬಳಕೆ ಮಾಡಿರುವ ಕಾಂಡೋಮ್ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಮೇ 13ರಂದು ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಗ್ರಾಮಸ್ಥರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳು ಈ ಬಗ್ಗೆ ಹೇಳಿರದಿದ್ದರೇ ಇನ್ನೂ ದೌರ್ಜನ್ಯಗಳು ಮುಂದುವರೆಯುತ್ತಿದ್ದವು ಎಂದು ಪೋಷಕರು ಆರೋಪಿಸಿದ್ದಾರೆ.