ಗುವಾಹಟಿ(ಅಸ್ಸೋಂ):ಪ್ರೀತಿಗೊಸ್ಕರ ಪ್ರೇಮಿಗಳು ಅನೇಕ ರೀತಿಯ ತ್ಯಾಗ-ಬಲಿದಾನಗಳನ್ನು ಮಾಡಿರುವ ಸಾಕಷ್ಟು ಪ್ರಕರಣಗಳಿವೆ. ಆದರೆ, ಅಸ್ಸೋಂನಲ್ಲಿ ವಿಚಿತ್ರ ಮತ್ತು ವಿಭಿನ್ನ ಘಟನೆ ನಡೆದಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಇಲ್ಲೊಬ್ಬಳು 19 ವರ್ಷದ ಯುವತಿ ತನ್ನ ಬಾಯ್ಫ್ರೆಂಡ್ಗೆ ಮಾರಣಾಂತಿಕ ಖಾಯಿಲೆ ಏಡ್ಸ್ ಇದೆ ಎಂದು ಗೊತ್ತಾದ ಬಳಿಕ ತನ್ನ ದೇಹದೊಳಗೂ ಎಚ್ಐವಿ ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಈ ಮೂಲಕ ಆತನ ಮೇಲಿನ ವಿಲಕ್ಷಣ ಪ್ರೀತಿ ಪ್ರದರ್ಶಿಸಿದ್ದಾಳೆ. ಅಸ್ಸೋಂನ ಕಮ್ರೂಪ್ ಜಿಲ್ಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ರಾಜಧಾನಿ ಗುವಾಹಟಿಯಿಂದ 30 ಕಿಲೋ ಮೀಟರ್ ದೂರದ ಸುಲ್ಕುಚಿ ಎಂಬ ಹಳ್ಳಿಯಲ್ಲಿ ಪ್ರಕರಣ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಓದುತ್ತಿರುವ ಯುವತಿ ಈ ರೀತಿ ನಡೆದುಕೊಂಡಿದ್ದಾಳೆ. ಈಕೆಯ ಪ್ರಿಯಕರ ಸದ್ಯ ಜೈಲಿನಲ್ಲಿದ್ದು, ಆತನಿಗೆ ಏಡ್ಸ್ ಇದೆ. ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಯತ್ನವನ್ನೂ ಈಕೆ ನಿರಂತರವಾಗಿ ನಡೆಸುತ್ತಿದ್ದಾಳೆ.
ಪ್ರೇಮ ಕಹಾನಿಯ ವಿವರ:ಮೂರು ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಯುವತಿ ಹಾಗೂ ಯುವಕ ಪರಿಚಯವಾಗಿದ್ದರು. ತದನಂತರ ಪರಸ್ಪರ ಪ್ರೀತಿಸಲು ಶುರು ಮಾಡ್ತಾರೆ. ಈ ಪ್ರೀತಿ ಅತ್ಯಂತ ಗಾಢವಾಗಿ ಬೆಳೆಯುತ್ತದೆ. ಇದರ ಮಧ್ಯೆ ಯುವಕನಿಗೆ ಎಚ್ಐವಿ ಸೋಂಕು ಇರುವುದು ಯುವತಿಗೆ ಗೊತ್ತಾಗುತ್ತದೆ. ಗೆಳೆಯನಿಗೆ ಎಚ್ಐವಿ ಪಾಸಿಟಿವ್ ಇದೆ ಅಂತ ಗೊತ್ತಾದ್ರೂ ಸಹ ಆತನೊಂದಿಗೆ ಮೂರು ಸಲ ಮನೆ ಬಿಟ್ಟು ಪರಾರಿಯಾಗಿದ್ದಳು. ಆದರೆ, ಯುವತಿಯ ಕುಟುಂಬಸ್ಥರು ಆಕೆಯನ್ನು ವಾಪಸ್ ಕರೆತಂದಿದ್ದಾರೆ. ಯುವಕನನ್ನು ಸೆರೆಹಿಡಿದ ಅವರು ಪೊಲೀಸರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ:ನೆಲಕ್ಕುರುಳಿ ಬಿದ್ದ ಬೋಗಿಗಳ ಮೇಲೆ ನಿಂತು ಸೆಲ್ಫಿ; ಯುವಕರಿಬ್ಬರಿಗೆ ತಾಗಿದ ಹೈಟೆನ್ಷನ್ ವೈರ್!
ಬಾಯ್ಫ್ರೆಂಡ್ ದೇಹದಿಂದ ರಕ್ತ ತೆಗೆದು ಇಂಜೆಕ್ಟ್: ಓಡಿ ಹೋಗಿದ್ದ ಸಂದರ್ಭದಲ್ಲಿ ಗೆಳೆಯನ ದೇಹದಿಂದ ರಕ್ತ ಹೊರತೆಗೆದ ಯುವತಿ ಅದನ್ನು ತನ್ನ ದೇಹದೊಳಗೆ ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಇದನ್ನು ಆಕೆಯೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಆತನೊಂದಿಗೆ ಮೂರು ಸಲ ಓಡಿ ಹೋಗಿದ್ದು, ದೈಹಿಕ ಸಂಪರ್ಕ ಬೆಳೆಸಿರುವುದಾಗಿಯೂ ತಿಳಿಸಿದ್ದಾಳೆ!. ಈ ಹಿನ್ನೆಲೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಲಾಗಿದ್ದು, ಏಡ್ಸ್ ಇರುವುದು ಪತ್ತೆಯಾಗಿದೆ.