ಲಖನೌ(ಉತ್ತರ ಪ್ರದೇಶ):ಕರ್ನಾಟಕದಲ್ಲಿ ಉದ್ಭವವಾಗಿರುವ ಹಿಜಾಬ್ ವಿವಾದ ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೂ ಲಗ್ಗೆ ಹಾಕಿದ್ದು, ರಾಜಕೀಯ ರೂಪ ಪಡೆದುಕೊಂಡಿದೆ. ಇದರ ಮಧ್ಯೆ ಉತ್ತರ ಪ್ರದೇಶದಲ್ಲಿ ಹಿಜಾಬ್ ಹಾಕಿಕೊಂಡು ಬೋರ್ಡ್ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌದ ಶಾಮಿನಾ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಇಂಟರ್ ಕಾಲೇಜ್ನಲ್ಲಿ ಈ ಪ್ರಕರಣ ನಡೆದಿದೆ. ನಿನ್ನೆಯಿಂದ ಬೋರ್ಡ್ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯೋರ್ವಳು ಹಿಜಾಬ್ ಹಾಕಿಕೊಂಡು ಬಂದಿದ್ದಳು. ಈ ವೇಳೆ ಆಕೆಯನ್ನು ತಡೆಯಲಾಗಿದೆ. ಬಾಲಕಿ ಮತ್ತು ಆಕೆಯ ಪೋಷಕರು ಇದರ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ, ತಪಾಸಣೆ ನಡೆಸಿ ನಂತರ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಲಖನೌದ ಹನುಮಾನ್ ಪ್ರಸಾದ್ ರಸ್ತೋಗಿ ಇಂಟರ್ ಕಾಲೇಜ್ನಲ್ಲೂ ವಿದ್ಯಾರ್ಥಿಯೋರ್ವಳು ಹಿಜಾಬ್ ತೆಗೆದನಂತರವೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.