ಮೊರಾದಾಬಾದ್, ಉತ್ತರಪ್ರದೇಶ:ಲಖೀಂಪುರ ಖೇರಿಯಲ್ಲಿ ಇಬ್ಬರು ಸಹೋದರಿಯರನ್ನು ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆಗೈದ ಅಮಾನುಷ ಘಟನೆ ಹಸಿರಾಗಿರುವಾಗಲೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯನ್ನು ಅಪಹರಿಸಿ ರೇಪ್ ಮಾಡಿದ್ದು, ಆಕೆ ಅವರಿಂದ ತಪ್ಪಿಸಿಕೊಂಡು ವಿವಸ್ತ್ರಳಾಗಿ ರಸ್ತೆಯ ಮೇಲೆ ಭಯದಿಂದ ಓಡುತ್ತಿರುವ ದೃಶ್ಯ ವೈರಲ್ ಆಗಿದೆ.
ಈ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 20 ದಿನಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದೆ. ಕಾಮುಕರಿಂದ ತಪ್ಪಿಸಿಕೊಂಡ ಸಂತ್ರಸ್ತೆ ರಸ್ತೆಯ ಮೇಲೆ ನಗ್ನವಾಗಿ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.
ಘಟನೆ ಏನು?:ಸೆಪ್ಟೆಂಬರ್ 1 ರಂದು ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ 15 ವರ್ಷದ ಬಾಲಕಿಯನ್ನು ನಾಲ್ವರು ಯುವಕರು ಅಪಹರಿಸಿಕೊಂಡು ಪಕ್ಕದ ಅರಣ್ಯಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ಕಿರುಚಾಡುತ್ತಿರುವುದನ್ನು ಕೇಳಿದ ದಾರಿಹೋಕರು ಅಲ್ಲಿಗೆ ಹೋದಾಗ ಕೀಚಕರು ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.