ನವದೆಹಲಿ :ಇಲ್ಲಿನ ದಾಬ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವತಿಯನ್ನು ಕೊಲೆ ಮಾಡಿ ಚರಂಡಿಗೆ ಬಿಸಾಡಿದ್ದಲ್ಲದೇ ಮುಖ ಮತ್ತು ಗುಪ್ತಾಂಗಗಳನ್ನು ಸುಟ್ಟು (Girl private parts burnt) ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರ ಮತ್ತು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಯುವತಿಯನ್ನು ಕೊಲೆ ಮಾಡಿದ ಬಳಿಕ ದೇಹವನ್ನು ಚರಂಡಿಯಲ್ಲಿ ಬಿಸಾಡಲಾಗಿದೆ. ಅಲ್ಲದೇ, ಯುವತಿಯ ಗುರುತು ಪತ್ತೆ ಆಗಬಾರದೆಂದು ದುಷ್ಕರ್ಮಿಗಳು ಮುಖವನ್ನು ಜಜ್ಜಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, ಯುವತಿಯ ಗುಪ್ತಾಂಗಗಳನ್ನೂ ಸುಟ್ಟು ಹಾಕಿ ಕ್ರೌರ್ಯ ಮೆರೆದಿದ್ದಾರೆ.
ಯುವತಿಯ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ. ಈ ವೇಳೆ ಮೃತದೇಹ ವಿವಸ್ತ್ರವಾಗಿತ್ತು. ಮುಖ ಸುಟ್ಟಿದ್ದರಿಂದ ಯುವತಿಯ ಗುರುತು ಪತ್ತೆಯಾಗುತ್ತಿಲ್ಲ. ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಪರಾಧ ತನಿಖಾ ತಂಡ ಮತ್ತು ಎಫ್‌ಎಸ್‌ಎಲ್ ತಂಡ ಆಗಮಿಸಿ ತನಿಖೆ ಆರಂಭಿಸಿದೆ. ಘಟನೆಯ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಇದರೊಂದಿಗೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುತ್ತಿದೆ.
ಅಲ್ಲದೇ, ಯುವತಿಯ ನಾಪತ್ತೆ ಕುರಿತು ಯಾವುದಾದರೂ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.