ಫಾರುಕಾಬಾದ್(ಉತ್ತರಪ್ರದೇಶ):ಉತ್ತರಪ್ರದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ. ವಿರೋಧದ ಮಧ್ಯೆ ಪ್ರೀತಿಸುತ್ತಿದ್ದ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಕುಟುಂಬಸ್ಥರೇ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ. ಫಾರೂಕಾಬಾದ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ಪ್ರೇಮಿಗಳನ್ನು 15 ವರ್ಷದ ಬಾಲಕಿ ಮತ್ತು 25 ವರ್ಷದ ಯುವಕ ಎಂದು ಗುರುತಿಸಲಾಗಿದೆ.
ಬಾಲಕಿ ಅಪ್ರಾಪ್ತೆಯಾಗಿದ್ದರೂ ಯುವಕನ ಪ್ರೀತಿಯ ಜಾಲಕ್ಕೆ ಬಿದ್ದಿದ್ದಳು. ಇದಕ್ಕೆ ಕುಟುಂಬಸ್ಥರ ವಿರೋಧವಿತ್ತು. ತನ್ನ ಮಗಳಿಂದ ದೂರವಾಗಲು ಬಾಲಕಿಯ ಕುಟುಂಬಸ್ಥರು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇದನ್ನು ಲೆಕ್ಕಿಸದೇ ಇಬ್ಬರೂ ಪ್ರೀತಿಸುತ್ತಿದ್ದರು. ಇದರಿಂದ ಬಾಲಕಿಯ ಕುಟುಂಬಸ್ಥರು ಇಬ್ಬರನ್ನೂ ಸಂಧಾನಕ್ಕೆಂದು ಕರೆದುಕೊಂಡು ಹೋಗಿ ಮಾವಿನ ತೋಟದಲ್ಲಿ ಇಬ್ಬರ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.