ಹೈದರಾಬಾದ್ (ತೆಲಂಗಾಣ): ನಗರದ ಸಿಟಿ ಮಾಲ್ ಸೆಂಟರ್‌ನಲ್ಲಿರುವ ಪ್ಲೇ ಝೋನ್‌ನಲ್ಲಿ ಮೂರು ವರ್ಷದ ಬಾಲಕಿ ತನ್ನ ಕೈಯನ್ನು ಯಂತ್ರದಲ್ಲಿಟ್ಟಿದ್ದು, ಆಕೆಯ ನಾಲ್ಕು ಬೆರಳುಗಳು ತುಂಡಾಗಿವೆ. ಸ್ಮ್ಯಾಶ್ ಝೋನ್ ಆಯೋಜಕರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಮಗುವಿನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಜಾರಹಿಲ್ಸ್ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಂಜಾರಹಿಲ್ಸ್‌ನ ಇಬ್ರಾಹಿಂ ನಗರದಲ್ಲಿ ವಾಸಿಸುವ ಖಾಸಗಿ ಉದ್ಯೋಗಿ ಸೈಯದ್ ಮಕ್ಸೂದ್ ಅಲಿ ತಮ್ಮ ಪತ್ನಿ ಮೆಹ್ತಾಬ್ ಜಹಾನ್‌ರೊಂದಿಗೆ ಶನಿವಾರ ತಮ್ಮ ಮೂವರು ಮಕ್ಕಳು ಮತ್ತು ಸೊಸೆಯನ್ನು ಬಂಜಾರಹಿಲ್ಸ್ ರಸ್ತೆ ಸಂಖ್ಯೆ 1 ರಲ್ಲಿನ ಸ್ಮ್ಯಾಶ್ ಬೌಲಿಂಗ್ ಗೇಮಿಂಗ್ ಪ್ಲೇ ಝೋನ್‌ಗೆ ಆಟವಾಡಲು ಕರೆದುಕೊಂಡು ಹೋಗಿದ್ದರು. ಮಾಲ್‌ನ ನಾಲ್ಕನೇ ಮಹಡಿಯಲ್ಲಿ ಸ್ಮ್ಯಾಶ್ ಬೌಲಿಂಗ್ ಗೇಮಿಂಗ್ ಪ್ಲೇ ಝೋನ್ ಇದೆ. ಮಕ್ಸೂದ್ ಮತ್ತು ಜಹಾನ್ ಅವರ ಮೂರು ವರ್ಷದ ಮಗಳು ರೋಬೋಟಿಕ್ ಸ್ಪೇಸ್ ಷಟಲ್ ಪ್ಲೇಯಿಂಗ್ ಮೆಷಿನ್ ಬಳಿ ಹೋಗಿದ್ದಾಳೆ. ಯಂತ್ರದ ಹಿಂಬದಿಯಲ್ಲಿ ಮುಚ್ಚಳ ತೆರೆದಿದ್ದು ಅದನ್ನು ಆಟದ ಪ್ರದೇಶವೆಂದೇ ಭಾವಿಸಿ ಬಲಗೈಯನ್ನು ಒಳಗೆ ಹಾಕಿದ್ದಳು. ಚಾಲನೆಯಲ್ಲಿರುವ ಯಂತ್ರಕ್ಕೆ ಕೈ ಹಾಕಿದ್ದು, 3 ಬೆರಳು ಮತ್ತು ತೋರುಬೆರಳು ಭಾಗಶಃ ನಜ್ಜುಗುಜ್ಜಾಗಿದೆ. ಮಗು ಕಿರುಚಿದ್ದನ್ನು ಗಮನಿಸಿದ ಪೋಷಕರು ಕೂಡಲೇ ಯಂತ್ರದಿಂದ ಮಗುವನ್ನು ದೂರ ಎಳೆದುಕೊಂಡು ಹೋಗಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಆಕೆಯ ಬಲಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದಾರೆ. ಬೆರಳುಗಳು ಸಂಪೂರ್ಣ ಮುರಿದು ಹೋಗಿವೆ. ಮರು ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.