ಪಾಲ್ಘರ್(ಮಹಾರಾಷ್ಟ್ರ):ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವಕ ಯುವತಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದಿದೆ. ಇದೇ ವೇಳೆ, ಗುಂಡು ಹಾರಿಸಿ ಪರಾರಿಯಾಗುವಾಗ ಆರೋಪಿಯು ಕಾರಿಗೆ ಡಿಕ್ಕಿ ಹೊಡೆದಿದ್ದು, ನಂತರ ರಕ್ಷಣಾ ಪಡೆಯ ಸೇನಾ ಟ್ರಕ್ಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ.
ಮಹಾರಾಷ್ಟ್ರದ ಬೋಯಿಸರ್-ಪಾಲ್ಘರ್ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ಯುವಕ, ಯುವತಿಯ ಕೊಲೆ ಮಾಡಿದ್ದಾನೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಕೃಷ್ಣ ಯಾದವ್ ಎಂಬ ಯುವಕ, ಯುವತಿಯ ಮೇಲೆ ಪಿಸ್ತೂಲ್ನಿಂದ ಗುಂಡಿನ ದಾಳಿ ನಡೆಸಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯುವತಿ ನೇಹಾ ಮೆಹ್ತೋ ರೈಲ್ವೆ ಮೇಲ್ಸೇತುವೆ ಬಳಿ ಬರುತ್ತಿದ್ದಾಗ ಹಿಂದಿನಿಂದ ಬಂದ ಯುವಕ ಕೃತ್ಯ ಎಸಗಿದ್ದಾನೆ. ಗುಂಡಿನ ದಾಳಿಯಿಂದ ಯುವತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.