ಆಗ್ರಾ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಆಗ್ರಾದಲ್ಲಿ ಇಂದು ಬೆಳಗ್ಗೆ ಭೀಕರ ದುರಂತ ಸಂಭವಿಸಿತು. ಆಗ್ರಾ ಸಿಟಿ ಸ್ಟೇಷನ್ ರಸ್ತೆಯಲ್ಲಿರುವ ಧರ್ಮಶಾಲಾದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಿಂದಾಗಿ ಅನೇಕ ಮನೆಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದವು. ಮನೆಯಲ್ಲಿ ಮಲಗಿದ್ದ ಮೂವರು ವ್ಯಕ್ತಿಗಳು ಅವಶೇಷಗಳಡಿ ಸಿಲುಕಿದ್ದಾರೆ. ಇಬ್ಬರನ್ನು ಹೊರತೆಗೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಣ್ಣು ಮಗುವೊಂದು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಸಂಪೂರ್ಣ ವಿವರ: ನೆಲಮಾಳಿಗೆಯ ಉತ್ಖನನದ ಸಂದರ್ಭದಲ್ಲಿ ಈ ಮನೆಗಳು ಕುಸಿದು ಬಿದ್ದಿವೆ. ಕ್ಷಣಾರ್ಧದಲ್ಲಿ ಅವಶೇಷಗಳು ಸಣ್ಣ ಬೆಟ್ಟದಂತೆ ಗೋಚರಿಸಿತು. ಮನೆಯೊಂದರಲ್ಲಿ ಮಲಗಿದ್ದ ವಿವೇಕ್ ಕುಮಾರ್ ಹಾಗು ಇಬ್ಬರು ಪುತ್ರಿಯರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಕಿರುಚಾಟ ಕೇಳಿ ಸ್ಥಳದಲ್ಲಿದ್ದ ಜನರು ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರು ಮತ್ತು ಆ್ಯಂಬುಲೆನ್ಸ್ಗೆ ಮಾಹಿತಿ ಮುಟ್ಟಿಸಿದ್ದಾರೆ.
ಅಧಿಕಾರಿಗಳು ಆಗಮಿಸುವಷ್ಟರಲ್ಲೇ ಅವಶೇಷಗಳಡಿ ಇದ್ದ ಇಬ್ಬರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ತಂಡ ಹಾಗೂ ಅಗ್ನಿಶಾಮಕ ದಳ ಕೂಡ ಸ್ಥಳಕ್ಕೆ ಆಗಮಿಸಿತ್ತು. ತರಾತುರಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸ್ ತಂಡ ಅವಶೇಷಗಳಡಿ ಸಿಲುಕಿದ್ದ 4 ವರ್ಷದ ಹೆಣ್ಣು ಮಗುವನ್ನು ಹೊರತೆಗೆದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದ್ರೆ ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ ಎಂದು ಆಗ್ರಾ ನಗರದ ಉಪ ಪೊಲೀಸ್ ಆಯುಕ್ತರು ತಿಳಿಸಿದರು.