ಬೆಟ್ಟಿಯಾ (ಬಿಹಾರ):ದರೋಡೆಕೋರರು ಮನೆಗಳಿಗೆ ಕನ್ನ ಹಾಕಲು ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತ ಮಾಡಿ ದೋಚುವುದುಂಟು. ಬರಗಾಲ ಬಿದ್ದರೆ, ಉತ್ಪಾದನೆ ಕೊರತೆಯಿಂದ ವಿದ್ಯುತ್ ಸರಬರಾಜು ಕಂಪನಿಗಳು ಲೋಡ್ ಶೆಡ್ಡಿಂಗ್ ಮಾಡುವುದನ್ನೂ ನೋಡಿದ್ದೇವೆ. ಆದರೆ, ಇಲ್ಲೊಬ್ಬ ಪ್ರಿಯತಮೆ ತನ್ನ ಪ್ರಿಯಕರನನ್ನು ಸೇರಲು ದಿನವೂ ರಾತ್ರಿ ಊರಿನ ವಿದ್ಯುತ್ ಪೂರೈಕೆಯನ್ನು ನಿಲ್ಲಿಸುತ್ತಿದ್ದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಇದನ್ನು ಪತ್ತೆ ಮಾಡಿದ ಗ್ರಾಮಸ್ಥರು ಪ್ರೇಮಿಗಳಿಗೆ ಗೂಸಾ ನೀಡಿದ್ದಾರೆ.
ಬಿಹಾರದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಪ್ರತಿ ದಿನ ರಾತ್ರಿಯಾದರೆ ಸಾಕು ಆ ಊರಿಗೆ ಕರೆಂಟ್ ಹೋಗುತ್ತಿತ್ತು. ಇದು ವಿದ್ಯುತ್ ಸರಬರಾಜು ಕಂಪನಿಯ ಕೃತ್ಯ ಎಂದು ಭಾವಿಸಿದ್ದ ಜನರು ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದರು. ಆದರೆ, ಈ ಮಸಲತ್ತಿನ ಹಿಂದಿನ ಸೂತ್ರಧಾರಿ ಯುವತಿ ಎಂಬುದು ಯಾರ ಗಮನಕ್ಕೂ ಬಂದಿರಲಿಲ್ಲ. ಪ್ರಿಯತಮೆ ತನ್ನವನಿಗಾಗಿ ಇಂತಹ ವಿಚಿತ್ರ ಪರಿಹಾರ ಕಂಡುಕೊಂಡಿದ್ದು ಗ್ರಾಮಸ್ಥರಿಗೆ ಅಚ್ಚರಿಯ ಜೊತೆಗೆ ಕೋಪ ನೆತ್ತಿಗೇರಿಸಿದೆ.
ಘಟನೆಯ ಹಿನ್ನೆಲೆ:ಗ್ರಾಮದ ಯುವಕ- ಯುವತಿ ಪ್ರೇಮಿಗಳಾಗಿದ್ದರು. ಆಕೆಗೆ ತನ್ನವನನ್ನು ಭೇಟಿ ಮಾಡುವ ಹಪಹಪಿ. ಇದಕ್ಕಾಗಿ ಯುವತಿ ಉಪಾಯ ಮಾಡಿ ರಾತ್ರಿ ಎಲ್ಲರೂ ಮಲಗಿದಾಗ ಒಬ್ಬಳೇ ಬಂದು ಊರಲ್ಲಿದ್ದ ವಿದ್ಯುತ್ಪರಿವರ್ತಕದ ತಂತಿಗಳನ್ನು ತಪ್ಪಿಸಿ ಸಂಪರ್ಕ ಕಡಿತ ಮಾಡುತ್ತಿದ್ದಳು. ಪೂರ್ತಿ ಕತ್ತಲು ಆವರಿಸಿದ ಬಳಿಕ ಆಕೆ ತನ್ನವನ ಜೊತೆ ಸಮಯ ಕಳೆಯುತ್ತಿದ್ದಳಂತೆ.
ರಾತ್ರಿಯಾದರೆ ಸಾಕು ದಿನವೂ ಕರೆಂಟ್ ಕಟ್ ಆಗುತ್ತಿದ್ದರಿಂದ ಗ್ರಾಮಸ್ಥರು ಕುಪಿತಗೊಂಡಿದ್ದರು. ಇದ್ಯಾಕೋ ಅತಿಯಾಯ್ತು ಅನ್ನಿಸಿತ್ತು. ಇದು ಅಧಿಕಾರಿಗಳ ಕೈವಾಡವಲ್ಲ ಎಂಬುದು ಅವರಿಗೆ ಗೊತ್ತೇ ಆಗಿರಲಿಲ್ಲ. ರಾತ್ರಿಯಾದರೆ ವಿದ್ಯುತ್ ಕಡಿತವಾಗೋದು ಯಾಕೆ ಅನ್ನೋದಕ್ಕೆ ಉತ್ತರ ಹುಡುಕಲಾರಂಭಿಸಿದ್ದರು. ಆಗ ಕಿಲಾಡಿ ಯುವತಿಯ ಕೈವಾಡ ಬಯಲಾಗಿದೆ. ವಿದ್ಯುತ್ ಪರಿವರ್ತಕದ ತಂತಿಗಳನ್ನು ತಪ್ಪಿಸುತ್ತಿದ್ದಾಗ ಗ್ರಾಮಸ್ಥರು ಯುವತಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದೆಲ್ಲವೂ ಅವನಿಗಾಗಿ..!ಇವರಿಬ್ಬರಿಂದಾಗಿ ಇಡೀ ಗ್ರಾಮ ದಿನವೂ ವಿದ್ಯುತ್ ಕಡಿತದ ಸಮಸ್ಯೆಗೆ ಒಳಗಾಗುತ್ತಿದ್ದರಿಂದ ಕೋಪಗೊಂಡಿದ್ದ ಗ್ರಾಮಸ್ಥರು ಆಕೆಯ ಜೊತೆಗೆ ಪ್ರಿಯಕರನನ್ನೂ ಹಿಡಿದು ಥಳಿಸಿದ್ದಾರೆ. ಇಷ್ಟಲ್ಲದೇ, ದಿನನಿತ್ಯದ ಕತ್ತಲೆಯಿಂದಾಗಿ ಗ್ರಾಮದಲ್ಲಿ ಕಳ್ಳತನಗಳು ನಡೆದಿವೆ. 2 ಬೈಕ್, ಹಲವು ಮೇಕೆಗಳು ಹಾಗೂ ಮೋಟಾರ್ವೊಂದುಯ ಕದಿಯಲಾಗಿದೆ. ಗ್ರಾಮಸ್ಥರು ಇಬ್ಬರನ್ನು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಾಮಸ್ಥರ ದಾಳಿಗೆ ಹೆದರದ ಯುವತಿ ಜನರೊಂದಿಗೇ ವಾಗ್ವಾದ ನಡೆಸಿದ್ದಾಳೆ. ಅಲ್ಲದೇ, ಹಲ್ಲೆ ಮಾಡಿದ್ದರ ಮೇಳೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಪ್ರೇಮಿಯನ್ನೂ ಬಲವಾಗಿ ಸಮರ್ಥಿಸಿಕೊಂಡು, ಗ್ರಾಮಸ್ಥರಿಂದ ಆತನನ್ನು ರಕ್ಷಿಸುತ್ತಿದ್ದಾಳೆ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿಚಾರಣೆ ನಡೆಸಿದ ಪೊಲೀಸರು, ಉಭಯ ಕುಟುಂಬಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬಳಿಕ ಯುವತಿ ಮತ್ತು ಆಕೆಯ ಗೆಳೆಯನ ಮದುವೆ ಒಪ್ಪಿಗೆ ಸೂಚಿಸಿದ್ದಾರೆ. ಇಬ್ಬರ ಪ್ರೇಮಸಂಬಂಧದಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರಿಗೂ ಇದರಿಂದ ಮುಕ್ತಿ ಸಿಕ್ಕು, ಪ್ರಕರಣ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ:ದಾವಣಗೆರೆ: ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿಡಿಗೇಡಿ ಯುವಕ ಸೆರೆ