ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): "ಹಿಂದೂ ಧರ್ಮ ತುಂಬಾ ಪುರಾತನ ಧರ್ಮ. ಇಸ್ಲಾಂ ಹುಟ್ಟಿದ್ದು 1,500 ವರ್ಷಗಳ ಹಿಂದೆ. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರೇ ಇರಲಿಲ್ಲ. ಕಾಶ್ಮೀರಿ ಪಂಡಿತರನ್ನೇ ಇಸ್ಲಾಂಗೆ ಮತಾಂತರ ಮಾಡಲಾಗಿದೆ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ದೋಡಾ ಜಿಲ್ಲೆಯಲ್ಲಿ ಸೋಮವಾರ (ಆಗಸ್ಟ್ 14) ಸಭೆಯೊಂದರಲ್ಲಿ ಮಾತನಾಡುತ್ತಾ ಅವರು, ''ನಾವು ಹಿಂದೂಗಳು, ಮುಸ್ಲಿಮರು, ದಲಿತರು ಹಾಗೂ ಕಾಶ್ಮೀರಿಗಳಿಗಾಗಿ ಈ ರಾಜ್ಯವನ್ನು ನಿರ್ಮಿಸಿದ್ದೇವೆ. ಇಲ್ಲಿಗೆ ಯಾರೂ ಹೊರಗಿನಿಂದ ಬಂದಿಲ್ಲ. ಇದು ನಮ್ಮ ಪ್ರದೇಶ'' ಎಂದರು. ಮುಂದುವರೆದು ಮಾತನಾಡಿ, ''ಸಂಸತ್ತಿನಲ್ಲಿ ನಿಮಗೆ ತಿಳಿಯದ ಹಲವಾರು ವಿಷಯಗಳನ್ನು ನಾನು ಗಮನಿಸಿದ್ದೇನೆ. ನನ್ನ ಸಹೋದ್ಯೋಗಿ ಜನಪ್ರತಿನಿಧಿಯೊಬ್ಬರು ಹಲವು ಮುಸ್ಲಿಮರು ಹೊರಗಿನಿಂದ ಬಂದಿದ್ದಾರೆ ಎಂದು ಹೇಳಿದರು. ಇದನ್ನು ನಾನು ನಿರಾಕರಿಸಿದೆ'' ಎಂದು ತಿಳಿಸಿದರು.
''ಇಸ್ಲಾಂ ಕೇವಲ 1500 ವರ್ಷಗಳಷ್ಟೇ ಹಿಂದಿನದು. ಹಿಂದೂ ಧರ್ಮ ಅತ್ಯಂತ ಹಳೆಯದು. ಮೊಘಲ್ ಸೈನ್ಯದಲ್ಲಿ ಬಂದಿದ್ದ 10 ರಿಂದ 20 ಜನರಿಂದ ಇಸ್ಲಾಂ ಹೊರಗಿನಿಂದ ಹುಟ್ಟಿಕೊಂಡಿರಬೇಕು. ಉಳಿದಂತೆ ಸಿಖ್ ಹಾಗೂ ಹಿಂದೂಗಳು ಮತಾಂತರಗೊಂಡಿದ್ದಾರೆ. ಕಾಶ್ಮೀರವೇ ಇದಕ್ಕೆ ಉದಾಹರಣೆ. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಯಾವ ಮುಸ್ಲಿಮರಿದ್ದರು?. ಕಾಶ್ಮೀರಿ ಪಂಡಿತರನ್ನೇ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ'' ಎಂದು ಆಜಾದ್ ವಿವರಿಸಿದರು. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಆಜಾದ್ 2022ರ ಆಗಸ್ಟ್ನಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‌ನಲ್ಲಿ ದಶಕಗಳ ಕಾಲ ಇದ್ದ ಅವರು, ಪಕ್ಷದ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದರು. ಅಲ್ಲದೇ, ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರೂ ಆಗಿದ್ದರು. ಕಾಂಗ್ರೆಸ್ ತೊರೆದ ಬಳಿಕ ತಮ್ಮದೇ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಆಜಾದ್ ಪಾರ್ಟಿ ಸ್ಥಾಪಿಸಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಬಿಡಲು ರಾಹುಲ್ ಗಾಂಧಿ ಕಾರಣ, ಮೋದಿ ಚತುರ ಆಡಳಿತಗಾರ: ಗುಲಾಂ ನಬಿ ಆಜಾದ್