ಕಥುವಾ (ಶ್ರೀನಗರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ತಪ್ಪು. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ.
ರಾಹುಲ್‌ರನ್ನು ಅನರ್ಹಗೊಳಿಸಿರುವುದನ್ನು ನಾನು ವಿರೋಧಿಸುತ್ತೇನೆ. ಈ ಸ್ಥಾನದಲ್ಲಿ ಲಾಲು ಪ್ರಸಾದ್ ಯಾದವ್ ಆಗಲಿ ಅಥವಾ ಯಾವುದೇ ಸಂಸದರಾಗಲಿ, ಶಾಸಕರಾಗಲಿ ಯಾರೇ ಇದ್ದರೂ ನಾನು ಇದಕ್ಕೆ ವಿರೋಧ ವ್ಯಕ್ತಡಿಸುತ್ತಿದ್ದೆ. ಈ ಮೊದಲು, ಉನ್ನತ ನ್ಯಾಯಾಲಯ ಶಿಕ್ಷೆ ವಿಧಿಸುವವರೆಗೆ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂಬ ನಿಯಮವಿತ್ತು" ಎಂದು ಮಾಜಿ ಕಾಂಗ್ರೆಸ್ ನಾಯಕ ತಿಳಿಸಿದರು.
ಈ ಹಿಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈಗ ರಾಹುಲ್ ಗಾಂಧಿ ಸರದಿ. ಹೀಗೆ ಮಾಡುತ್ತಾ ಹೋದಲ್ಲಿ ಇಡೀ ಸಂಸತ್ತು ಮತ್ತು ವಿಧಾನಸಭೆಗಳು ಖಾಲಿಯಾಗುತ್ತವೆ. ರಾಜಕೀಯ ನಾಯಕರಿಗೆ ಪ್ರತ್ಯೇಕ ಮಾನದಂಡ ಇರಬೇಕು ಎಂದು ಆಜಾದ್ ಕಳವಳ ವ್ಯಕ್ತಪಡಿಸಿದರು.
ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾನುವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಬಿಜೆಪಿ, ಯಾವುದಕ್ಕಾಗಿ ನಿಮ್ಮ ಪ್ರತಿಭಟನೆ? ದೇಶದ ಸಂವಿಧಾನದ ವಿರುದ್ಧವೇ? ಅಥವಾ ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದು ಘೋಷಿಸಿದ ಕಾನೂನಿನ ವಿರುದ್ಧವೇ? ಅಥವಾ ದೇಶದ ಸಂಪೂರ್ಣ ಹಿಂದುಳಿದ ಸಮುದಾಯದ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲೆಂದೇ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!
ಪ್ರಕರಣದ ಹಿನ್ನೆಲೆ:2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, "ಎಲ್ಲಾ ಕಳ್ಳರು ಮೋದಿ ಉಪನಾಮವನ್ನು ಏಕೆ ಹೊಂದಿದ್ದಾರೆ" ಎಂದು ವ್ಯಂಗ್ಯವಾಡಿದ್ದರು. ಈ ಬಗ್ಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎನ್ನುವವರು ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರಿದ್ದ ಪೀಠ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಅಲ್ಲದೇ ರಾಹುಲ್ ನೀಡಿದ ಹೇಳಿಕೆ ಇನ್ನೊಬ್ಬರ ಮಾನಹಾನಿ ಮಾಡಿದೆ. ಇದು ಕ್ರಿಮಿನಲ್ ಹೇಳಿಕೆ ಎಂದು ನ್ಯಾಯಾಲಯ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ಬಳಿಕ ಲೋಕಸಭಾ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ.
ಇದನ್ನೂ ಓದಿ:2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಶಿಕ್ಷೆ, ಜಾಮೀನು ಮಂಜೂರು