ನವದೆಹಲಿ:ಕಳೆದ ವರ್ಷ ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಕಣ್ಣೀರು ಹಾಕಿದ್ದರು. ಈ ಬೆಳವಣಿಗೆ ಅಂದು ರಾಜಕಾರಣಿಗಳ ಹುಬ್ಬೇರಿಸಿದ್ದು ಅಷ್ಟೇ ಅಲ್ಲ, ಕನಿಷ್ಠ ರಾಜಕೀಯ ತಿಳುವಳಿಕೆ ಹೊಂದಿದ್ದ ಜನಸಾಮಾನ್ಯರ ಕುತೂಹಲಕ್ಕೂ ಕಾರಣವಾಗಿತ್ತು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಆಜಾದ್ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದ್ದೂ ಆಯ್ತು, ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಹುಳುಕುಗಳನ್ನು ಬಹಿರಂಗವಾಗಿ ಹೊರಗಿಟ್ಟು ತೀವ್ರ ಟೀಕಾ ಸಮರ ನಡೆಸಿದ ಆಜಾದ್ ಕಾಂಗ್ರೆಸ್ ತ್ಯಜಿಸಿದ್ದೂ ಆಯ್ತು. ಈ ಬಗ್ಗೆ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಆಜಾದ್, "ನಾನು ಪ್ರಧಾನಿ ನರೇಂದ್ರ ಮೋದಿ ಓರ್ವ ಒರಟುತನದ ವ್ಯಕ್ತಿ ಎಂದುಕೊಂಡಿದ್ದೆ. ಆದ್ರೆ ಅವರಿಗೆ ಮಾನವೀಯತೆ ಇದೆ" ಎಂದು 2006 ರ ಘಟನೆಯನ್ನು ನೆನೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಮಾತು "ಅಂದು ನಾನು ರಾಜ್ಯಸಭೆಯಿಂದ ನಿರ್ಗಮಿಸುತ್ತಿದ್ದೇನೆ ಎಂಬ ಒಂದೇ ವಿಚಾರಕ್ಕೆ ಸಂಸತ್ತಿನಲ್ಲಿ ಮೋದಿ ಕಣ್ಣೀರು ಹಾಕಲಿಲ್ಲ. ನೀವು ಅವರ ಭಾಷಣದಲ್ಲಿದ್ದ ವಿಚಾರಗಳನ್ನು ಓದಿದರೆ ಇದು ಗೊತ್ತಾಗುತ್ತದೆ. ಅಲ್ಲಿ ಮೋದಿ ಒಂದು ಘಟನೆಯ ಬಗ್ಗೆ ಮಾತನಾಡುತ್ತಿದ್ದರು" ಎಂದರು.
ಹಾಗಾದರೆ ಆ ಘಟನೆ ಏನು?: "2006 ರಲ್ಲಿ ಕಾಶ್ಮೀರದಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಗುಜರಾತ್‌ನ ಕೆಲವು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಆಗ ಕಾಶ್ಮೀರದಲ್ಲಿ ನಾನು ಸಿಎಂ ಆಗಿದ್ದೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದರು. ಅವರು ನನಗೆ ಕರೆ ಮಾಡಿದರು. ಕಾಶ್ಮೀರದ ನಡೆಯುತ್ತಿದ್ದ ಭೀಕರ ದೌರ್ಜನ್ಯದ ಘಟನಾವಳಿಗಳೂ ನನ್ನನ್ನೂ ತೀವ್ರ ಬೇಸರಕ್ಕೆ ತಳ್ಳಿದ್ದವು. ಆ ಸಂದರ್ಭದಲ್ಲಿ ನಾನು ಅವರ ಜೊತೆ ಮಾತನಾಡಲಿಲ್ಲ. ಆದ್ರೆ ನಾನು ಅಳುತ್ತಿದ್ದ ಸನ್ನಿವೇಶವನ್ನು ನನ್ನ ಸಿಬ್ಬಂದಿ ಫೋನಿನ ಮೂಲಕವೇ ಅವರಿಗೆ ಕೇಳಿಸುತ್ತಿದ್ದರು. ಶ್ರೀನಗರದಲ್ಲಿ 2006ರ ಮೇ 25 ರಂದು ಈ ಘಟನೆ ನಡೆದಿದ್ದು, ಗುಜರಾತ್ ನಾಲ್ವರು ಪ್ರವಾಸಿಗರು ಬಲಿಯಾಗಿದ್ದರು. ಮತ್ತೆ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ:ಗುಲಾಂ ನಬಿ ಆಜಾದ್ಗೆ ಕಣ್ಣೀರಿನ ವಿದಾಯ ಹೇಳಿದ ಪ್ರಧಾನಿ ಮೋದಿ!
"ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೋದಿ ನನ್ನ ಕಚೇರಿಗೆ ಪದೇ ಪದೇ ಫೋನ್ ಮಾಡುತ್ತಲೇ ಇದ್ದರು. ನಂತರದಲ್ಲಿ ಘಟನೆಯಲ್ಲಿ ಬಲಿಯಾದ ಜನರ ಮೃತದೇಹಗಳನ್ನು ವಿಮಾನದ ಮೂಲಕ ಸ್ಥಳಾಂತರಗೊಳಿಸಲಾಗುತ್ತಿತ್ತು. ಮೃತರ ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿತ್ತು, ಮನ ಕಲಕುವಂತಿತ್ತು. ಇದನ್ನು ಟೀವಿಯಲ್ಲಿ ನೋಡಿ ನನ್ನ ಕಣ್ಣಾಲಿಗಳೂ ತೇವಗೊಂಡಿದ್ದವು. ನನ್ನ ದೃಶ್ಯಗಳೂ ಟಿವಿಯಲ್ಲಿ ಪ್ರಸಾರವಾಗಿದ್ದವು. ಆದ್ರೆ ನಾನು ಆ ಸಂದರ್ಭದಲ್ಲಿ ಮೌನವಾಗಿಯೇ ಇದ್ದೆ".
ಮೋದಿ ಮಾನವೀಯ ಗುಣ ಮೆಚ್ಚಿದ ಆಜಾದ್: "ಇದಕ್ಕೂ ಮುನ್ನ ನಾನು, ಮೋದಿ ಓರ್ವ ಒರಟು ವ್ಯಕ್ತಿಯಾಗಿರಬಹುದು ಎಂದುಕೊಂಡಿದ್ದೆ. ಅವರಿಗೆ ಜನರ ಬಗ್ಗೆ ಅಷ್ಟೊಂದು ಕಾಳಜಿ ಬರಲು ಸಾಧ್ಯವಿಲ್ಲ. ಯಾಕಂದ್ರೆ ಪತ್ನಿಯಾಗಲೀ ಮಕ್ಕಳಾಗಲೀ ಅವರಿಗಿಲ್ಲ. ಆದ್ರೆ ಅಂದು ತನ್ನ ರಾಜ್ಯದ ಜನರಿಗಾಗಿ ಅವರು ಮಾನವೀಯತೆ ತೋರಿಸಿದ್ದರು" ಎಂದು ಹಿಂದಿನ ಘಟನೆಯನ್ನು ಸ್ಮರಿಸುತ್ತಾ ಸಂಸತ್ತಿನಲ್ಲಿ ಮೋದಿ ರಾಜ್ಯಸಭೆ ಕಣ್ಣೀರು ಪ್ರಸಂಗಕ್ಕೆ ಆಜಾದ್ ಸುದೀರ್ಘ ವಿವರಣೆ ಕೊಟ್ಟರು.
ಐದು ದಶಕಗಳ ಸಂಬಂಧವನ್ನು ಕಡಿದುಕೊಂಡು ಕಾಂಗ್ರೆಸ್ ಪಕ್ಷ ತೊರೆದ ದಿನದಿಂದ ದೇಶಾದ್ಯಂತ ಕಾಂಗ್ರೆಸ್ ನಾಯಕರು ಆಜಾದ್ ಮೇಲೆ ಮುಗಿಬಿದ್ದು ಟೀಕಾ ಸಮರ ನಡೆಸುತ್ತಿದ್ದಾರೆ. ಆಜಾದ್ ಅವರನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂಬ ಗಂಭೀರ ಆರೋಪ ಅವರದ್ದು. ಇಂಥ ಸಂದರ್ಭದಲ್ಲೇ ಆಜಾದ್, ಮೋದಿ ಮಾನವೀಯ ಮುಖವನ್ನು ಕೊಂಡಾಡಿದ್ದು ಇಲ್ಲಿ ಗಮನಾರ್ಹ.
ಬಿಜೆಪಿ ಜೊತೆ ನನಗೆ ಯಾವುದೇ ವ್ಯವಹಾರವಿಲ್ಲ: ಬಿಜೆಪಿ ಸೇರ್ಪಡೆ ಹಾಗು ಹೊಸ ಪಕ್ಷ ಸ್ಥಾಪನೆಯ ಬಗ್ಗೆಯೂ ಅವರು ಮಾತನಾಡಿದರು. "ನನಗೆ ಬಿಜೆಪಿ ಜೊತೆ ಯಾವುದೇ ವ್ಯವಹಾರವಿಲ್ಲ. ಪಕ್ಷ ಸ್ಥಾಪನೆ ಮಾಡುವುದಿದ್ದರೆ ಅದು ಜಮ್ಮು ಕಾಶ್ಮೀರದಿಂದಲೇ ಆರಂಭವಾಗಲಿದೆ ಎಂದರು. ಮುಂದಿನ ವರ್ಷ ಕಣಿವೆ ನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
6 ದಿನ ನಿದ್ದೆ ಮಾಡಿಲ್ಲ- ಗುಲಾಂ ನಬಿ ಆಜಾದ್: "ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವುದಕ್ಕೂ ಮುಂಚಿತವಾಗಿ ನಾನು ಆರು ದಿನಗಳ ಕಾಲ ನಿದ್ದೆ ಮಾಡಿರಲಿಲ್ಲ. ಪಕ್ಷಕ್ಕಾಗಿ ನಾವು ರಕ್ತ ನೀಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷದ ಜನರು ಇಂದು ನಿಷ್ಪ್ರಯೋಜಕರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಉತ್ತಮ ವಕ್ತಾರರು ಇಲ್ಲದಿರುವುದು ಬೇಸರದ ಸಂಗತಿ. ಸೋನಿಯಾ ಗಾಂಧಿ ಅವರ ಬಗ್ಗೆ ನನಗೆ 30 ವರ್ಷಗಳ ಹಿಂದೆ ಇದ್ದ ಗೌರವ ಈಗಲೂ ಇದೆ. ರಾಹುಲ್ ಗಾಂದಿ ಮೇಲೂ ನನಗೆ ಗೌರವವಿದೆ. ವೈಯಕ್ತಿಕವಾಗಿ ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವೆ. ನಾವು ಅವರನ್ನು ಯಶಸ್ವಿ ನಾಯಕನನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ, ಆದರೆ ಅವರು ಆಸಕ್ತಿ ಹೊಂದಿಲ್ಲ ಎಂದು ಆಜಾದ್ ಬೇಸರ ವ್ಯಕ್ತಪಡಿಸಿದರು.