ನವದೆಹಲಿ: ಕಳೆದ ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಹೊಸ ಪಕ್ಷ ಸ್ಥಾಪಿಸಿರುವ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಮತ್ತೆ ಕಾಂಗ್ರೆಸ್‌ಗೆ ಮರಳುವ ಸಾಧ್ಯತೆ ಇದೆ. ಈ ಬಗ್ಗೆ ಆಜಾದ್ ಮತ್ತು ಕಾಂಗ್ರೆಸ್ ನಡುವೆ ಮಾತುಕತೆ ಸಹ ಆರಂಭವಾಗಿದೆ ಎಂದು ವರದಿಯಾಗಿದೆ. ಆದರೆ, ಇಂದೊಂದು ಆಧಾರರಹಿತ ಸುದ್ದಿ ಎಂದು ಆಜಾದ್ ಸ್ಪಪ್ಟಪಡಿಸಿದ್ದಾರೆ.
ಆಜಾದ್ ಆಗಸ್ಟ್ 26ರಂದು ಕಾಂಗ್ರೆಸ್ ಪಕ್ಷದೊಂದಿಗಿನ ತಮ್ಮ 52 ವರ್ಷಗಳ ಸುದೀರ್ಘ ಒಡನಾಟ ತೊರೆದಿದ್ದರು. ನಂತರ ಅಕ್ಟೋಬರ್‌ನಲ್ಲಿ ತಮ್ಮ ಹೊಸ ಪಕ್ಷವಾದ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಕಟ್ಟಿದ್ದರು. ಇದಾದ ನಂತರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಜಾದ್ ಅವರು ಬಿಜೆಪಿಗೆ ಕಾಂಗ್ರೆಸ್ ಮಾತ್ರವೇ ಸರಿಯಾದ ರಾಜಕೀಯ ಎದುರಾಳಿ ಎಂದು ಹೇಳಿದ್ದರು. ಅಲ್ಲದೇ, ಇದರ ನಡುವೆ ನಾನು ಕಾಂಗ್ರೆಸ್‌ನ ನೀತಿಗೆ ವಿರುದ್ಧವಾಗಿಲ್ಲ. ಆದರೆ, ಪಕ್ಷದಲ್ಲಿ ದುರ್ಬಲ ವ್ಯವಸ್ಥೆಯ ಸಮಸ್ಯೆಗಳಿವೆ ಎಂದು ಹೇಳಿಕೆ ಕೊಟ್ಟಿದ್ದರು.
ಇದನ್ನೂ ಓದಿ:ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್
ಭಾರತ್ ಜೋಡೋ ಯಾತ್ರೆಗೆ ಆಹ್ವಾನ: ಗುಲಾಂ ನಬಿ ಆಜಾದ್ ಅವರ ಈ ಹೇಳಿಕೆ ನಂತರ ಕಾಂಗ್ರೆಸ್ ಸಹ ಪ್ರಕ್ರಿಯೆ ನೀಡಿತ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಹಿರಿಯ ನಾಯಕ, ಯಾತ್ರೆಯ ಸಂಚಾಲಕ ದಿಗ್ವಿಜಯ ಸಿಂಗ್ ಬಹಿರಂಗವಾಗಿಯೇ ಆಹ್ವಾನಿಸಿದ್ದರು. ಮೂಲಗಳ ಪ್ರಕಾರ, ಆಜಾದ್ ಹೊರತುಪಡಿಸಿ ಅನೇಕ ಜಮ್ಮು ಮತ್ತು ಕಾಶ್ಮೀರದ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾಜಿ ಸಿಎಂಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆಯ ಭಾಗವಾಗಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಇನ್ನೊಂದು ಗಮನಾರ್ಹ ಅಂಶ ಎಂದರೆ, ಕಾಂಗ್ರೆಸ್ ಪಕ್ಷದ ಇತರ ನಾಯಕರಾದ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಕೂಡ ಆಜಾದ್ ಅವರನ್ನು ಸಂಪರ್ಕಿಸಿ ಯಾತ್ರೆಯಲ್ಲಿ ಭಾಗ ವಹಿಸುವುದರ ಹೊರತಾಗಿಯೂ ಕಾಂಗ್ರೆಸ್‌ಗೆ ಮರಳುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಭಿನ್ನಮತ ಶಮನ ಪ್ರಯತ್ನ:ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಕಾಂಗ್ರೆಸ್ ಜಿ-23 ಗಂಪಿನಲ್ಲಿ ಗುರುತಿಸಿಕೊಂಡಿದ್ದರು. ಪಕ್ಷವು ಇತ್ತೀಚೆಗೆ ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನು ಬಿಹಾರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದೆ. ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಹರಿಯಾಣದ ಕಾಂಗ್ರೆಸ್ ಉಸ್ತುವಾರಿ ಹೊಣೆ ವಹಿಸಿದೆ. ಈ ಮೂಲಕ ಪಕ್ಷದಲ್ಲಿ ಭಿನ್ನಮತದ ಶಮನಕ್ಕೆ ಪ್ರಯತ್ನ ಮಾಡಿದೆ. ಈಗ ಗುಲಾಂ ನಬಿ ಆಜಾದ್ ಅವರೊಂದಿಗೆ ಕಾಂಗ್ರೆಸ್ ಸಂಪರ್ಕದಲ್ಲಿದೆ ಎಂದು ವರದಿಯಾಗಿತ್ತು.
ಕೈ ಹಿಡಿಯುವ ವರದಿ ತಳ್ಳಿ ಹಾಕಿದ ಹಿರಿಯ ನಾಯಕ:ಕಾಂಗ್ರೆಸ್‌ಗೆ ಸೇರುತ್ತಾರೆ ಎನ್ನುವ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಸ್ವತಃ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದ್ದು, ಇದೊಂದು ಆಧಾರರಹಿತ ವರದಿ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಬಗ್ಗೆ ವರದಿ ನೋಡಿ ನನಗೆ ಆಘಾತವಾಗಿದೆ. ದುರದೃಷ್ಟವಶಾತ್ ನನ್ನ ನಾಯಕರು ಮತ್ತು ಬೆಂಬಲಿಗರ ಮನೋಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಆಗೊಮ್ಮೆ, ಈಗೊಮ್ಮೆ ಇಂತಹ ಕಥೆಗಳನ್ನು ಬಿತ್ತುತ್ತಿದ್ದಾರೆ ಎಂದು ಈಟಿವಿ ಭಾರತ್‌ಗೆ ಅವರು ಸ್ಪಷ್ಟಪಡಿಸಿದ್ದಾರೆ.
ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಆಜಾದ್:ಕಾಂಗ್ರೆಸ್ ಪಕ್ಷ ಬಿಡುವಾಗ ಗುಲಾಂ ನಬಿ ಆಜಾದ್ ಸುದೀರ್ಘವಾದ ಐದು ಪುಟಗಳ ಬಹಿರಂಗ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ನೇರವಾಗಿ ವಾಗ್ದಾಳಿ ಮಾಡಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ. ಅಲ್ಲದೇ, ರಾಹುಲ್ ಗಾಂಧಿಯವರ ವರ್ತನೆ ಚಿಕ್ಕ ಮಕ್ಕಳಂತೆ ಇದೆ. ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗಿದೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ:ಗುಜರಾತ್, ಹಿಮಾಚಲದಲ್ಲಿ ಕಾಂಗ್ರೆಸ್ ಗೆಲ್ಲಲಿ: ಅಚ್ಚರಿ ಹುಟ್ಟಿಸಿದ ಗುಲಾಂ ನಬಿ ಆಜಾದ್ ಹೇಳಿಕೆ