ನವದೆಹಲಿ:ಕಾಂಗ್ರೆಸ್ ಪಕ್ಷದಲ್ಲಿ ಬೆನ್ನುಮೂಳೆ ಇಲ್ಲದವರು ಮಾತ್ರ ಇರಲು ಸಾಧ್ಯ. ಪಕ್ಷದಿಂದ ನಾನು ಹೊರಬರಲು ರಾಹುಲ್ ಗಾಂಧಿಯೇ ಕಾರಣ ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿ ತಾವು ವಿರಚಿತ ಆಜಾದ್ ಆತ್ಮಚರಿತ್ರೆ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ಈಗಿನ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮತ್ತೆ ನನ್ನನ್ನು ಕಾಂಗ್ರೆಸ್ಗೆ ಆಹ್ವಾನಿಸಿದರೂ, ಆ ನಿರ್ಧಾರ ನನ್ನ ಕೈಯಲ್ಲಿಲ್ಲ ಎಂದರು.
ನಾನು ಕಾಂಗ್ರೆಸ್ನಲ್ಲಿದ್ದಾಗ ಪಕ್ಷದ ಆಂತರಿಕ ಸುಧಾರಣೆಗಾಗಿ ಜಿ-23 ಯಿಂದ ಹಲವು ಸಲಹೆಗಳನ್ನು ನೀಡಲಾಗಿತ್ತು. ಆದರೆ, ರಾಹುಲ್ ಗಾಂಧಿ ಅವರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಅವರ ಆಪ್ತರಾಗಿದ್ದ ಬಿಜೆಪಿಯಲ್ಲಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮುಂದೆಯೇ ಈ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಅವರು ಅಂದು ಸಲಹೆಗಳನ್ನು ಆಲಿಸಿದ್ದರೆ ಕಾಂಗ್ರೆಸ್ ಈಗಿನ ಸ್ಥಿತಿಗೆ ತಲುಪುತ್ತಿರಲಿಲ್ಲ. ನಾವಿಂದು ಕಾಂಗ್ರೆಸ್ ತೊರೆಯಲು ರಾಹುಲ್ ಗಾಂಧಿಯೇ ಕಾರಣ ಎಂದು ಆಜಾದ್ ದೂರಿದರು.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನಾಯಕತ್ವವನ್ನು ಶ್ಲಾಘಿಸಿದ ಆಜಾದ್, "ಅವರು ಅತ್ಯುತ್ತಮ ನಾಯಕರು. ನಾನು ಅವರೆಲ್ಲರಿಗೂ ತುಂಬಾ ಹತ್ತಿರವಾಗಿದ್ದೆ. ಇಂದಿರಾ ಗಾಂಧಿ ಮತ್ತು ನಾನು ಉತ್ತಮ ರಾಜಕೀಯ ಸಮೀಕರಣವನ್ನು ಹೊಂದಿದ್ದೆವು. ಅವರು ಪಕ್ಷದೊಳಗೆ ಒಗ್ಗಟ್ಟನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿದಿದ್ದರು. ರಾಜೀವ್ ಮತ್ತು ಸಂಜಯ್ ಗಾಂಧಿ ಅವರ ನಾಯಕತ್ವವನ್ನೂ ಆಜಾದ್ ಇದೇ ವೇಳೆ ಹೊಗಳಿದ್ದಾರೆ.
ಬಿಜೆಪಿ ಜೊತೆ ಕೈಜೋಡಿಸಲು ರೆಡಿ:ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸವಲತ್ತುಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಒಂದು ವೇಳೆ ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಲೇ ಚುನಾವಣೆ ನಡೆದರೆ, ಅಲ್ಲಿ ಸರ್ಕಾರ ರಚಿಸುವ ಅವಕಾಶ ಉದ್ಭವವಾದರೆ ಅಂತಹ ಸಂದರ್ಭದಲ್ಲಿ ಬಿಜೆಪಿಯ ಜೊತೆ ಹೋಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಆಜಾದ್ ಸ್ಪಷ್ಟಪಡಿಸಿದರು.