ನೈನಿತಾಲ್ (ಉತ್ತರಾಖಂಡ): ಹಿಮಾಲಯದ ಪರ್ವತಗಳಿಂದ ಕೂಡಿರುವ ಉತ್ತರಾಖಂಡದಲ್ಲಿ ಸದಾ ಹವಾಮಾನ ವೈಪರೀತ್ಯ ಇದ್ದೇ ಇರುತ್ತದೆ. ಬೆಟ್ಟಗುಡ್ಡದ ಪ್ರದೇಶಗಳು ಹಾಗೂ ನಿರಂತರ ಮಳೆಯಿಂದ ನಾನಾ ರೀತಿಯ ಕಷ್ಟಗಳನ್ನು ವರ್ಷಪೂರ್ತಿ ಎದುರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಈ ರಾಜ್ಯದ ಜನರದ್ದು. ಇದು ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇದನ್ನು ಮನಗಂಡ ಕೆಲವು ಯುವಕರು ವಿಶೇಷವಾದ ಕುದುರೆಯ ಸಂಚಾರಿ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಿದ್ದು, ಮಕ್ಕಳ ಅಕ್ಷರ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ.
ಗ್ರಂಥಾಲಯ ಎಂದರೆ ಒಂದೆಡೆ ಕುಳಿತು ಓದುವುದನ್ನೇ ಹೆಚ್ಚಾಗಿ ನೋಡಿರುತ್ತೇವೆ. ಇದರ ಹೊರತಾಗಿ ವಾಹನಗಳಲ್ಲಿಯೂ ಪುಸಕ್ತಗಳನ್ನಿಟ್ಟು ಸ್ಥಳದಿಂದ ಸ್ಥಳಕ್ಕೆ ಸಾಗುವ ಸಂಚಾರಿ ಗ್ರಂಥಾಲಯಗಳೂ ಇವೆ. ಇವುಗಳಿಗೆ ಮೊಬೈಲ್ ಲೈಬ್ರರಿ ಅಂತಲೂ ಕರೆಯಲಾಗುತ್ತದೆ. ಆದರೆ, ಕುದುರೆಯ ಮೇಲೆ ಪುಸ್ತಕಗಳನ್ನು ಸಾಗಿಸುತ್ತಾ, ಮಕ್ಕಳನ್ನು ತಲುಪುವ ಕಾರ್ಯ ಉತ್ತರಾಖಂಡದ ಪರ್ವತ ಕಣಿವೆಗಳ ಗ್ರಾಮದಲ್ಲಿ ನಡೆಯುತ್ತಿದೆ.
ನೈನಿತಾಲ್ ಜಿಲ್ಲೆಯ ದೂರದ ಕೋಟಬಾಗ್ ಅಭಿವೃದ್ಧಿ ಬ್ಲಾಕ್‌ನ ಬಘ್ನಿ, ಜಲ್ನಾ, ಮಹಲ್ಧುರ, ಅಲೇಖ್, ಗೌತಿಯಾ, ಧಿನ್ವಖರಕ್ ಹಾಗೂ ಬಂಸಿ ಗ್ರಾಮಗಳಲ್ಲಿ ಕುದುರೆಗಳು ಪುಸ್ತಕಗಳನ್ನು ಹೊತ್ತು ಸಾಗಿ ಮಕ್ಕಳಿಗೆ ಅಕ್ಷರ ಕಲಿಕೆಗೆ ನೀರೆರೆಯುತ್ತಿವೆ. ಸಂಕಲ್ಪ್ ಯೂತ್ ಫೌಂಡೇಶನ್ ಸಂಸ್ಥೆಯ ನೆರವಿನಿಂದ ಮಲೆನಾಡಿನ ಮನೆಗಳಿಗೆ ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ಇಲ್ಲಿ ತಲುಪಿಸಲಾಗುತ್ತಿದೆ. ಯುವಕರಾದ ಶುಭಂ, ಸುಭಾಷ್ ಮತ್ತಿತರರು ಈ ಸಂಚಾರಿ ಗ್ರಂಥಾಲಯದ ಮೂಲಕ ಪ್ರತಿ ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಬೇಸಿಗೆ ರಜೆಯ ಸಂದರ್ಭದಲ್ಲಿ ಆರಂಭವಾದ ಕುದುರೆ ಗ್ರಂಥಾಲಯವು ಮಳೆಗಾಲದ ಕಷ್ಟಗಳ ದಿನಗಳಲ್ಲೂ ಮುಂದುವರಿದಿದೆ. ಸತತ ಮಳೆಯಿಂದ ಇಡೀ ರಾಜ್ಯ ಕಂಗೆಟ್ಟಿದೆ. ರಸ್ತೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಹಲವು ಗ್ರಾಮಗಳ ಸಂಪರ್ಕವನ್ನೇ ಕಡಿದುಕೊಂಡಿವೆ. ಇದರಿಂದ ಶಾಲೆಗಳನ್ನು ಮುಚ್ಚಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕುದುರೆ ಗ್ರಂಥಾಲಯ ಪ್ರಾರಂಭಿಸಲಾಗಿದೆ. ಪ್ರತಿ ಹಳ್ಳಿಯಿಂದ ಹಳ್ಳಿಗೆ ಸಂಚರಿಸಿ ಮಕ್ಕಳಿಗೆ ಓದಲು ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ.
ಆಪತ್ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಳ್ಳಿ-ಹಳ್ಳಿಗೆ ತೆರಳಿ ಶ್ರಮಿಸುತ್ತಿರುವ ಶುಭಂ ಮಾತನಾಡಿ, ''ಈ ಹಿಂದೆ ದ್ವಿಚಕ್ರ ವಾಹನದಲ್ಲಿ ಗ್ರಾಮಗಳಿಗೆ ತೆರಳಿ ಪುಸ್ತಕಗಳನ್ನು ತಲುಪಿಸುತ್ತಿದ್ದೆ. ಆದರೆ, ಇತ್ತೀಚೆಗೆ ಸಂಭವಿಸಿದ ಮಳೆ ದುರಂತದ ನಂತರ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಹೀಗಾಗಿ ಘೋಡಾ (ಕುದುರೆ) ಗ್ರಂಥಾಲಯಕ್ಕೆ ನಾಂದಿ ಹಾಡಲಾಗಿದೆ. ಇದರಿಂದ ಗುಡ್ಡಗಾಡು ಗ್ರಾಮಗಳಿಗೆ ತಲುಪಲು ಸಾಧ್ಯವಾಗುತ್ತಿದೆ'' ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ''ಬಘ್ನಿ, ಛಾಡಾ ಮತ್ತು ಜಲ್ನಾದಂತಹ ಗ್ರಾಮಗಳಲ್ಲಿ ಕೆಲವು ಯುವಕರು ಮತ್ತು ಸ್ಥಳೀಯ ಶಿಕ್ಷಣಪ್ರೇಮಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಆರಂಭಿಕ ಹಂತದಲ್ಲಿ, ಕವಿತಾ ರಾವತ್ ಮತ್ತು ಸುಭಾಷ್ ಬಧಾನಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕ್ರಮೇಣ ಇತರ ಹಳ್ಳಿಗಳ ಯುವಕರು ಮತ್ತು ಪೋಷಕರು ಬೆಂಬಲ ಸೂಚಿಸಿದರು. ವಾರದಲ್ಲಿ ಒಂದು ದಿನ ಪೋಷಕರು ತಮ್ಮ ಕುದುರೆಯನ್ನು ಸಂಚಾರಿ ಗ್ರಂಥಾಲಯಕ್ಕೆ ಬಳಸಲು ನೀಡುತ್ತಾರೆ'' ಎಂದು ಹೇಳಿದರು.
ಇದನ್ನೂ ಓದಿ:ಐಐಟಿ ಇಂದೋರ್ ಮಂಡಳಿ ಅಧ್ಯಕ್ಷರಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಶಿವನ್ ಆಯ್ಕೆ